ಮಜಿ, ವೀರಕಂಭ ಶಾಲೆ ಯಲ್ಲಿ 2024- 25 ನೇ ಸಾಲಿನ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕಲಿಕಾ ಹಬ್ಬ -ಕಹಳೆ ನ್ಯೂಸ್

ಬಂಟ್ವಾಳ : ವಿಫಲತೆಗಳ ಬಗ್ಗೆ ಚಿಂತಿಸದಿರು ಎಂಬಂತೆ ಸೋಲು ಗೆಲುವುಗಳ ಸಮಾನ ಸ್ವೀಕಾರದ ಮನೋಭಾವನೆಯನ್ನು ಎಳೆಯ ಮಕ್ಕಳಲ್ಲಿ ಬೆಳೆಸಲು ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸಲು ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ದಾಖಲಾತಿಯನ್ನು ಸುಧಾರಿಸುವ ಸಮುದಾಯದ ಜೊತೆಗೆ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಸರ್ಕಾರದಿಂದ ನಿರ್ವಹಿಸುವ ಕಲಿಕಾ ಹಬ್ಬ ಕಾರ್ಯಕ್ರಮವು ಉತ್ತಮ ಕೆಲಸವಾಗಿದೆ ಎಂಬುದಾಗಿ ಮಾlಜಿ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ದಾನಿಗಳಾದ ಸಂಜೀವ ಪೂಜಾರಿ ಹೇಳಿದರು.
ಅವರು 2024- 25 ನೇ ಸಾಲಿನ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕಲಿಕಾ ಹಬ್ಬವನ್ನು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರ ಕಂಬ ಇಲ್ಲಿ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿಕಾ ಹಬ್ಬದಲ್ಲಿ ಕಥೆ ಹೇಳುವುದು, ಕೈಬರಹ ಮತ್ತು ಕ್ಯಾಲಿಗ್ರಫಿ, ಸಂತೋಷದಾಯಕ ಗಣಿತ ಅಥವಾ ಮೆಮೊರಿ ಪರೀಕ್ಷೆ, ರಸಪ್ರಶ್ನೆ ಸಣ್ಣ ಸಣ್ಣ ಕಥೆ ಕಟ್ಟುವುದು ಮುಂತಾದ ಚಟುವಟಿಕೆಗಳು ಕ್ಲಸ್ಟರ್ ಹಂತದ ಶಾಲೆಗಳ ನಡುವೆ ನಡೆಯುತ್ತದೆ. ಪಠ್ಯ ಪುಸ್ತಕದ ಆಚೆಗೂ ಗ್ರಂಥಾಲಯದ ಪುಸ್ತಕ ಓದು ಕನ್ನಡ ಮತ್ತು ಇಂಗ್ಲಿಷ್ ಹಾಗೂ ತನ್ನ ಮಾತೃಭಾಷೆಯಲ್ಲೂ ವಿದ್ಯಾರ್ಥಿಗಳಿಗೆ ಕಥೆ ಹೇಳುವ ಅವಕಾಶ ಇರುವುದರಿಂದ ಮೌಖಿಕ ಅಭಿವ್ಯಕ್ತಿಯ ಕೌಶಲ ಒರೆಹಚ್ಚಬಹುದು. ಎಳವೆಯಲ್ಲಿ ರೂಡಿಸಿಕೊಂಡ ಚಂದದ ಕೈಬರಹದ ಶೈಲಿಯ ಮೂಲಕ ತಪ್ಪಿಲ್ಲದೆ ಬರೆಯಲು ಹಾಗೂ ಮೋಜಿನ ಗಣಿತ ಆಟಗಳ ಮೂಲಕ ಗಣಿತವನ್ನು ಸಂತಸದಾಯಕವಾಗಿ ಕಲಿಯಲು ಸಾಧ್ಯವಾಗುತ್ತದೆ. ಕ್ರಿಯಾಶೀಲತೆಯನ್ನು ಗುರುತಿಸಲು ಮೆಮೊರಿ ರಸಪ್ರಶ್ನೆಗಳು ಮಕ್ಕಳ ಜ್ಞಾನಕ್ಕೆ ಸಾಣೆ ಹಿಡಿಯುತ್ತವೆ ಜೊತೆಗೆ ಪೋಷಕರು ಮತ್ತು ಮಕ್ಕಳ ಸಹ ಸಂಬಂಧವನ್ನು ಬಲಗೊಳಿಸುತ್ತದೆ ಎಂದು ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಯವರು ತನ್ನ ಪ್ರಾಸ್ತಾವಿಕ ಮಾತಿನ ಮೂಲಕ ಕಲಿಕಾ ಹಬ್ಬದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ತಿಳಿಸಿದರು.
ವೀರಕಂಬ ಗ್ರಾಮ ಪಂಚಾಯಿತಿ ನ ಉಪಾಧ್ಯಕ್ಷರಾದ ಜನಾರ್ಧನ್ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.
ಸಭಾ ಕಾರ್ಯಕ್ರಮವನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ, ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವೀರಕಂಬ ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಗಾಂಭೀರ್, ಕಲ್ಲಡ್ಕ ಮಾದರಿ ಶಾಲೆಯ ಮುಖ್ಯ ಶಿಕ್ಷಕರಾದ ಅಬೂಬಕರ್ ಅಶ್ರಫ್, ಬಂಟ್ವಾಳ ತಾಲೂಕು ಕಲ್ಲಡ್ಕ ವಲಯದ ಶಿಕ್ಷಣ ಸಂಯೋಜಕರಾದ ಪ್ರತಿಮಾ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿ ರವೀಂದ್ರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್ ರಾಕೋಡ್, ಹಳೆ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರ, ಶಾಲೆಗೆ ನಿರಂತರ ಉಚಿತ ತರಕಾರಿ ಪೂರೈಸುತ್ತಿರುವ ಮಹಮ್ಮದ್ ಶರೀಫ್,ಕಲ್ಲಡ್ಕ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲೆಗಳಾದ ನೆಟ್ಲ, ಕಲ್ಲಡ್ಕ, ಬೋಳಂತೂರು, ಗೋಳ್ತಮಜಲು, ಬಾಯಿಲ, ಹಾಗೂ ಕೆಲಿಂಜ ಶಾಲೆಯ ಶಿಕ್ಷಕರು ಮತ್ತು ಸುಮಾರು 110 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಿಕಾ ಹಬ್ಬದ ಚಟುವಟಿಕೆಗಳು ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ನಡೆಯುತ್ತವೆ, ಸರ್ಕಾರಿ ಶಾಲೆಯ ಕಿರಿಯ ಪ್ರಾಥಮಿಕ ಹಂತದ ಮಕ್ಕಳ ಕಲಿಕೆಯ ಬಗ್ಗೆ ಸಮುದಾಯದ ಗಮನ ಸೆಳೆಯುವಲ್ಲಿ ಈ ಕಲಿಕಾ ಹಬ್ಬ ಸಹಕಾರಿಯಾಗಿದೆ. ಮಕ್ಕಳಿಗೆ ಕಲಿಕೆಯ ಸಾಪಲ್ಯತೆಯನ್ನು ಪ್ರದರ್ಶಿಸುವ ಸಲುವಾಗಿ ಈ ಹಬ್ಬ ರೂಪುಗೊಂಡಿದೆ, ಮಜಿ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬವು ವಿಶೇಷ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳಿಗೆ ಹಬ್ಬದ ವಾತಾವರಣವನ್ನು ಮೂಡಿಸಿದೆ, ಮಕ್ಕಳಿಗೆ ಒಂದು ಜಾತ್ರೆಯ ಮಾದರಿಯಲ್ಲಿ ಹಾಗೂ ವಿಶೇಷ ತಿನಿಸುಗಳ ಮೂಲಕ ಫುಡ್ ಬೆಸ್ಟ್ ನಂತೆ ಸಂತಸವನ್ನು ತಂದಿದೆ ಎಂಬುದಾಗಿ ಬಂಟ್ವಾಳ ತಾಲೂಕು ಕಲ್ಲಡ್ಕ ವಲಯದ ಶಿಕ್ಷಣ ಸಂಯೋಜಕಿ ಪ್ರತಿಮಾ ರವರು ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ತಿಳಿಸಿದರು.
ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ ದೈಹಿಕ ಶಿಕ್ಷಕ ಇಂದು ಶೇಖರ್ ಧನ್ಯವಾದವಿತ್ತರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.