ತೆಂಕುತಿಟ್ಟು ಯಕ್ಷಗಾನದಲ್ಲಿ ಕಲಾ ಪ್ರೌಢಿಮೆ ಮೆರೆಯುತ್ತಿರುವ ಗಾನ ಮಾಂತ್ರಿಕ, ಯುವ ಕಲಾವಿದ ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ –ಕಹಳೆ ನ್ಯೂಸ್

| ಯಕ್ಷ ಕಹಳೆ ವಿಶೇಷ ಬರಹ
ಯಕ್ಷಗಾನದ ವೇಷಧಾರಿ ಹಾಗೂ ಪ್ರಸಂಗಕರ್ತರಾಗಿ ತೆಂಕು ತಿಟ್ಟುವಿನಲ್ಲಿ ಕಲಾ ಪ್ರೌಢಿಮೆ ಮೆರೆಯುತ್ತಿರುವ ಗಾನ ಮಾಂತ್ರಿಕ, ಕಲಾವಿದರಾದ ದಿ. ವಿಶ್ವನಾಥ ಶೆಟ್ಟಿ ಸಿದ್ಧಕಟ್ಟೆ ಹಾಗೂ ಜಯಂತಿ ವಿ ಶೆಟ್ಟಿ ಇವರ ದ್ವಿತೀಯ ಪುತ್ರ ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ. ಮೂಡುಬಿದ್ರೆಯ ಎಮ್‌ಐಟಿಇ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಮಾಡಿದ್ದಾರೆ.
ಕಾಲೇಜು ದಿನಗಳಲ್ಲಿ ಯಕ್ಷಗಾನದ ಬಗ್ಗೆ ಅಷ್ಟೊಂದು ಆಸಕ್ತಿ ಇರದ ಭರತ್ ಅವರಿಗೆ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಲು ಪ್ರೇರಣೆ ಅವರ ತಂದೆ. ತಂದೆ ತೀರಿ ಹೋದ ಬಳಿಕ ತಂದೆಯ ಸಾಧನೆಯ ಬಗ್ಗೆ ಅರಿವಾಗಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿದ್ದು, ತಾನೂ ಕಲಿಯುವ ಛಲ ಹುಟ್ಟಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಲ್ಲಿ ಯಕ್ಷಗಾನ ಕಲೆಯನ್ನು ಕಲಿತುಕೊಂಡಿದ್ದಾರೆ. ಯಕ್ಷಗಾನಕ್ಕೆ ಪ್ರೇರಣೆ ನೀಡಿದ್ದು ತಂದೆಯಾದ್ರೆ ಯಕ್ಷಗಾನದ ಭಾಗವತಿಕೆ ಕ್ಷೇತ್ರಕ್ಕೆ ಬರಲು ಭರತ್ ಅವರಿಗೆ ಪ್ರೇರಣೆಯಾಗಿದ್ದು ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆ.
ಕೆಲವು ದಶಕಗಳ ಹಿಂದೆ ಪಟ್ಲ ಸತೀಶ್ ಶೆಟ್ಟಿಯವರಿಗೆ ಭಾಗವತಿಕೆ ಕೇಳಿದವರಿಗೆ ಅಥವಾ ಇವತ್ತು ಧ್ವನಿಸುರುಳಿಗಳ ಹಳೆ ವಿಡಿಯೋ ರೆಕಾರ್ಡ್‍ಗಳ ಮೂಲಕ ಕೇಳುತ್ತಿರುವವರಿಗೆ ಕಣ್ಣು ಮುಚ್ಚಿ ಭರತ್ ರಾಜ್ ಅವರ ಭಾಗವತಿಕೆಯನ್ನು ಕೇಳುತ್ತಿದ್ದರೆ ಇದು ಪಟ್ಲರದ್ದೇ ಧ್ವನಿಯೋ ಎನ್ನುವಂತೆ ಅನ್ನಿಸದೇ ಇರದು. ಪಟ್ಲರ ಧ್ವನಿಯ ಅಚ್ಚು ಪಳವಳಿಕೆಯಂತೆ ಹಾಡುವ ಚಾಕಚಕ್ಯತೆ ಭರತರಿಗಿದ್ದರೂ ಅವರನ್ನು ಅನುಕರಿಸದೆ ಪಟ್ಲರ ಶೈಲಿಯನ್ನು ಅನುಸರಿತ್ತಿದ್ದಾರೆ ಎನ್ನಬಹುದೇನೋ.
ಸುಸ್ಪಷ್ಟ ಸಾಹಿತ್ಯ, ತಾಳ ಲಯ ಜ್ಞಾನ, ಪ್ರಸಂಗದ ನಡೆಗಳು, ರಾಗಗಳ ಸಂಚಾರ ಇವೆಲ್ಲವನ್ನೂ ಮತ್ತಷ್ಟು ಸುಲಭವಾಗಿಸಲು ಪ್ರಸಕ್ತ ವರ್ಷದ ಪಾವಂಜೆ ಮೇಳದ ತಿರುಗಾಟ ಏಕಲವ್ಯನಂತೆ ಪಟ್ಲರ ಗಾಯನದ ಪ್ರೇರಣೆ ಪಡೆಯುತ್ತಿದ್ದ ಭರತರಿಗೆ ವರದಾನವಾಗದೇ ಇರದು. ಪಾವಂಜೆ ಮೇಳದ ಭಾಗವತರಾಗಿ ಪ್ರಸ್ತುತ ತಿರುಗಾಟ ಮಾಡುತ್ತಿರುವ ಭರತ್ ರಾಜ್ ತಮ್ಮದೇ ಆದಂತಹ ಯಕ್ಷಗಾನ ಅಭಿಮಾನ ಬಳಗವನ್ನು ಹೊಂದಿದ್ದಾರೆ. ಹತ್ತಾರು ವೇದಿಕೆಗಳಲ್ಲಿ ಗೌರವ ಸನ್ಮಾನಗಳು ಅವರನ್ನು ಮತ್ತಷ್ಟು ಕಲಾವಲಯದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಿದರೆ ‘ವಾ ಎಂಚಿ ಪದ ಪಂಡೆ ಮಾರ್ರೆ’ ಎನ್ನುವ ಅಭಿಮಾನಿಗಳ ಉದ್ಘಾರ, ರಂಗಮಂಚ ಏರಿದಾಗ ಬೀಳುವ ಶಿಳ್ಳೆಗಳು ತುಂಬು ಮನಸ್ಸಿನ ಪ್ರೇಕ್ಷಕರ ಕರತಾಳನ ಸಹ ಕಲಾವಿದರ ಸಹಕಾರ ಭವಿಷ್ಯದಲ್ಲೊಬ್ಬ ಸಮರ್ಥ ಭಾಗವತನನ್ನು ತೆಂಕುತಿಟ್ಟು ಯಕ್ಷಗಾನ ರಂಗ ಕಾಣಬಹುದು ಎನ್ನುವ ಎಲ್ಲಾ ಮುನ್ಸೂಚನೆ ಎದ್ದು ಎದ್ದು ಭರತರ ಇವತ್ತಿನ ಬೆಳವಣಿಗೆ ನೋಡುವಾಗ ಕಾಣುತ್ತದೆ.
ಯಕ್ಷಗಾನ ಬಯಲಾಟ, ಯಕ್ಷಗಾನ ನಾಟ್ಯ ವೈಭವಗಳು ಹಾಗೂ ಯಕ್ಷಗಾನ ತಾಳಮದ್ದಳೆಗಳಲ್ಲಿ ಹಿರಿಯ ಅನುಭವಿ ಕಲಾವಿದರುಗಳಿಂದ ಶಹಬ್ಬಾಸ್ ಗಿರಿಯನ್ನು ಗಿಟ್ಟಿಸಿಕೊಂಡು ಯಕ್ಷಲೋಕದಲ್ಲಿ ಗಾನ ಮಾಂತ್ರಿಕನಾಗಿ ದಿಗ್ವಿಜಯ ಮಾಡುತ್ತಿದ್ದಾರೆ. ಯುವ ಕಲಾವಿದ ಭರತ್ ರಾಜ್ ಅವರ ಕಲಾ ಜೀವನ ಇನ್ನಷ್ಟು ಎತ್ತರಕ್ಕೆ ಬೆಳೆದು ಮುಂದೆ ದೊಡ್ಡ ಕಲಾವಿದಾರಗಿ ಜತ್ತಿನಾದ್ಯಂತ ತಮ್ಮ ಹೆಸರನ್ನು ಪಸರಿಸುವಂತಾಗಲಿ ಅನ್ನೋದೆ ನಮ್ಮ ಆಶಯ.
ಯಕ್ಷಗಾನಂ ಗಲ್ಗೆ