ಮಾರ್ಚ್ 1 ರಿಂದ 9 ರ ವರೆಗೆ ಕಾರ್ಮಾರು ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ-ಕಹಳೆ ನ್ಯೂಸ್

ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಗೌರವಾಧ್ಯಕ್ಷತೆಯಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮಾರ್ಚ್ 1 ರಿಂದ 9 ರ ವರೆಗೆ ಜರಗಲಿರುವುದು.
1400 ವರ್ಷಗಳ ಇತಿಹಾಸ ಹೊಂದಿದ ಕಾರ್ಮಾರು ಕ್ಷೇತ್ರದಲ್ಲಿ 32 ವರ್ಷಗಳ ಬಳಿಕ ನೂತನ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಗೋಪುರ, ರಾಜಗೋಪುರದೊಂದಿಗೆ ನವೀಕರಣಗೊಂಡಿದೆಯೆಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 1 ರಂದು ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಹೊರಡಲಿದೆ. ಪ್ರತಿದಿನ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಯತಿಶ್ರೇಷ್ಟರು, ನಾಡಿನ ಗಣ್ಯರು ಭಾಗವಹಿಸುವರು. ಸಂಗೀತ, ನೃತ್ಯ, ಯಕ್ಷಗಾನ, ಭಜನೆ ಇರುವುದು. 9 ದಿನಗಳಲ್ಲಿ 9 ಯತಿವರೇಣ್ಯರು ಆಗಮಿಸುವರು, ಸಮಾರೋಪದಲ್ಲಿ ಮೈಸೂರು ರಾಜರಾದ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವರು. ಮಾರ್ಚ್ 6 ರಂದು ಮಹಾವಿಷ್ಣು ದೇವರ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯಲಿರುವುದು. ಮಾರ್ಚ್ 9 ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಹೇಶ್ ವಳಕುಂಜ, ಶ್ರೀಕೃಷ್ಣ ಭಟ್, ಗೋಪಾಲ ಭಟ್ ವಿ.ಎಸ್, ರಾಮ ಕಾರ್ಮಾರು, ಶ್ಯಾಮ ಪ್ರಸಾದ್ ಮಾನ್ಯ, ರಂಜಿತ್ ಮಾನ್ಯ, ಸುಂದರ ಶೆಟ್ಟಿ, ವಿಜಯ ಕುಮಾರ್ ಮಾನ್ಯ, ಮಾನ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು.