
ಮಂಗಳೂರು:ಶಿವರಾತ್ರಿ ಹಿನ್ನೆಲೆ ಪಾದಯಾತ್ರೆ ಆರಂಭಿಸಿರುವ ಸಾವಿರಾರು ಭಕ್ತರ ಹಲವು ತಂಡಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪಿಸುತ್ತಿವೆ.
ಬೆಂಗಳೂರು ಸಹಿತ ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಧರ್ಮಸ್ಥಳಕ್ಕೆ ಚಾರ್ಮಾಡಿ, ಕೊಕ್ಕಡ ಮೂಲಕ ಕಾಲ್ನಡಿಗೆಯಲ್ಲಿ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಶಿವ ಪಂಚಾಕ್ಷರಿ ಜಪ, ಭಜನೆ ಹೇಳುತ್ತಾ ಸಾಗುವ ಪಾದಯಾತ್ರಿಗಳು ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಘಾಟಿ ರಸ್ತೆಯಲ್ಲಿ ವಾಹನದಟ್ಟಣೆ ಅಧಿಕ ಇರುವುದರಿಂದ ನಿಧಾನವಾಗಿ ರಸ್ತೆ ಬದಿ ಚಲಿಸುವಂತೆ ಸೂಚಿಸಲಾಗಿದೆ. ಶಿವರಾತ್ರಿಯಲ್ಲಿ ಭಾಗವಹಿಸಲು ಪಾದಯಾತ್ರೆಯ ಮೂಲಕ ಭಕ್ತರು ಶ್ರದ್ಧೆ ಭಾವ ಭಕ್ತಿಯಿಂದ ನೂರಾರು ಕಿ.ಮೀಗಳನ್ನು ಈ ಉರಿಬಿಸಿಲನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಾಗಿಬರುತ್ತಿದ್ದಾರೆ. ಅವರ ಮಾತುಗಳಲ್ಲಿ ಮಂಜುನಾಥನನ್ನು ತಲುಪುವ ಸಮರ್ಪಣಾ ಭಾವ ಕಂಡುಬರುತ್ತದೆ.