
ಮಂಗಳೂರು: ದ.ಕ. ಜಿಲ್ಲಾದ್ಯಂತ ಭಾರೀ ಸೆಕೆ ಮುಂದುವರಿದಿದೆ. ಕೆಲವೆಡೆ ಮಧ್ಯಾಹ್ನ ವೇಳೆ 40 ಡಿ.ಸೆ.ಗೂ ಅಧಿಕ ತಾಪಮಾನ ದಾಖಲಾಗಿದೆ. ಜಿಲ್ಲೆಯಲ್ಲಿ ಬೆಳಗ್ಗಿನ ವೇಳೆ ಕೆಲವೆಡೆ ಮಂಜು ಕವಿದಿತ್ತು. ಬಳಿಕ ಬಿಸಿಲು ಮತ್ತು ಸೆಕೆಯ ಬೇಗೆ ಹೆಚ್ಚಾಗತೊಡಗಿತು. ಕರಾವಳಿ ಭಾಗದಲ್ಲಿ ಬಿಸಿ ಗಾಳಿ ಇರಬಹುದು ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಣೆ ಮಾಡಿತ್ತು.
ಭಾರತೀಯ ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ಬಿಸಿಗಾಳಿ ಹಾಗೂ ಆರ್ದ್ರ ಪರಿಸ್ಥಿತಿ ಮುಂದುವರಿಯಲಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ತಾಪಮಾನದಲ್ಲಿ ನಿರಂತರ ಏರಿಕೆ
ಜಿಲ್ಲೆಯಲ್ಲಿ ತಾಪಮಾನದಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಿದೆ. ಮಂಗಳೂರಿನಲ್ಲಿ ಬುಧವಾರ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಕೆಲವು ದಿನಗಳಿಗೆ ಹೋಲಿಸಿದರೆ ತಾಪಮಾನ ಇದುವೇ ಅಧಿಕ. ಇದರೊಂದಿಗೆ ವಾಡಿಕೆಗಿಂತ 3.1 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡಿತ್ತು. 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿ, ವಾಡಿಕೆಗಿಂತ 0.8 ಡಿಗ್ರಿ ಸೆಲ್ಸಿಯಸ್ ಹೆಚ್ಚಿತ್ತು.
ಬಿಸಿಗಾಳಿ; ಮುನ್ನೆಚ್ಚರಿಕೆ ಅಗತ್ಯ
ಕರಾವಳಿಯಲ್ಲಿ ಮುಂದಿನ ಎರಡು ದಿನಗಳ ಕಾಲ ಬಿಸಿಗಾಳಿ ಮುನ್ಸೂಚನೆ ಇದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ. ಸಾಧ್ಯವಾದಷ್ಟು ತಂಪಾದ ಸ್ಥಳವನ್ನು ಆಶ್ರಯಿಸುವುದು, ವಿಶ್ರಾಂತಿ ಪಡೆಯುವುದು, ಬಿಸಿಲಲ್ಲಿ ತೆರಳುವ ವೇಳೆ ಕೊಡೆ ಬಳಸುವುದು, ಹತ್ತಿಯ ಉಡುಪು, ಟೋಪಿಗಳನ್ನು ಧರಿಸುವುದು, ಸಾಕಷ್ಟು ನೀರು, ಮಜ್ಜಿಗೆ ಕುಡಿಯುವುದು, ಬಿಸಿಗಾಳಿಗೆ ತುತ್ತಾದವರಿಗೆ ತಂಪುಪಾನೀಯ, ಚಿಕಿತ್ಸೆ ಒದಗಿಸುವುದು ಮಾಡಬೇಕು. ಕಪ್ಪು, ಗಾಢ ಬಣ್ಣದ, ತೆಳುವಾದ, ಸಿಂಥೆಟಿಕ್ ಉಡುಪು ಧರಿಸಬಾರದು, ಹೆಚ್ಚಿನ ಬಿಸಿಲ ಸಮಯದಲ್ಲಿ ಶ್ರಮದ ಕೆಲಸ ಮಾಡಬಾರದು, ಬಿಸಿ ಚಹಾ, ಮದ್ಯ ಸೇವಿಸಬಾರದು ಎನ್ನುವ ಮುನ್ನೆಚ್ಚರಿಕೆ ನೀಡಲಾಗಿದೆ.
ಸದ್ಯಕ್ಕಿಲ್ಲ ಮಳೆ ಮುನ್ಸೂಚನೆ
ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಮೋಡದ ವಾತಾವರಣ ಇರಲಿದ್ದು, ಬಿಸಿಲ ಬೇಗೆ ಹೆಚ್ಚಲಿದೆ. ತಾಪಮಾನದಲ್ಲಿ 2ರಿಂದ 3 ಡಿ.ಸೆ. ಏರಿಕೆ ಕಾಣಬಹುದು.