
ಬಂಟ್ವಾಳ: ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್‌ನ ಕುರಿತು ಯಾವುದೇ ಸುಳಿವು ಸಿಗದೆ ಪ್ರಕರಣ ಇನ್ನಷ್ಟು ನಿಗೂಢತೆಯನ್ನು ಸೃಷ್ಟಿಸಿದ್ದು, ಪೊಲೀಸರು ಮೂರು ತಂಡಗಳಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರೂ ಶುಕ್ರವಾರ ರಾತ್ರಿವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ.
ಪ್ರಕರಣವನ್ನು ಶೀಘ್ರ ಬೇಧಿಸುವ ನಿಟ್ಟಿನಲ್ಲಿ ಆಗ್ರಹಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರೇ ಕಾರ್ಯಾಚರಣೆಗಿಳಿದಿದ್ದು, ಆದರೂ ಯಾವುದೇ ಸುಳಿವು ಕೂಡ ಸಿಗದಿರುವುದು ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿದೆ. ಪೊಲೀಸರು ಹಾಗೂ ಸಾರ್ವಜನಿಕರು ಫೆ. 27ರ ರಾತ್ರಿ ಹಾಗೂ ಶುಕ್ರವಾರವೂ ರೈಲ್ವೇ ಹಳಿಯ ಐದಾರು ಕಿ.ಮೀ. ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಫರಂಗಿಪೇಟೆಯ ಸುತ್ತಮುತ್ತಲ ಪ್ರದೇಶಗಳ ಸಿಸಿ ಕೆಮರಾಗಳನ್ನು ಪರಿಶೀಲಿಸಿದ್ದು, ದಿಗಂತ್‌ನ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.
ಫೆ. 25ರಂದು ಸಂಜೆ 7ಕ್ಕೆ ಮನೆಯಿಂದ ದೇವಸ್ಥಾನಕ್ಕೆ ಹೊರಟ ದಿಗಂತ್ ರಾತ್ರಿ 8.30ರ ಸುಮಾರಿಗೆ ಆಂಜನೇಯ ವ್ಯಾಯಾಮ ಶಾಲೆಯ ಬಳಿ ಓಡಾಡಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಅಲ್ಲಿಂದ ಯಾವ ಕಡೆಗೆ ಹೋಗಿದ್ದಾನೆ ಎಂಬುದು ತಿಳಿದುಬಂದಿಲ್ಲ. ಒಂದು ಮೂಲಗಳ ಪ್ರಕಾರ ಆತ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ. ಜತೆಗೆ ಆತನ ಚಪ್ಪಲಿಯಲ್ಲಿ ರಕ್ತದ ಕಲೆಗಳಿವೆ ಎನ್ನಲಾಗುತ್ತಿದ್ದು, ನಾಪತ್ತೆಯ ಎಫ್‌ಐಆರ್ ವರದಿಯಲ್ಲಿ ಅದು ದಾಖಲಾಗಿಲ್ಲ.
ಶುಕ್ರವಾರ ಕೂಡ ಬಂಟ್ವಾಳ ಗ್ರಾಮಾಂತರ ಇನ್‌ಸ್ಪೆಕ್ಟರ್ ಶಿವಕುಮಾರ್ ಅವರು ವಿದ್ಯಾರ್ಥಿ ಕಲಿಯುತ್ತಿದ್ದ ಮಂಗಳೂರಿನ ಕಾಲೇಜಿಗೆ ಭೇಟಿ ನೀಡಿ ಹಲವರನ್ನು ವಿಚಾರಣೆ ನಡೆಸಿದರೂ ಆತನ ಪತ್ತೆಗೆ ಸಹಕಾರಿಯಾಗುವ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿಯ ಮನೆಗೆ ವಿಹಿಂಪ ಮುಂದಾಳು ಶರಣ್ ಪಂಪುವೆಲ್ ಹಾಗೂ ಬಿಜೆಪಿ ಮುಂದಾಳು ಸಂತೋಷ್‌ಕುಮಾರ್ ರೈ ಅವರು ಭೇಟಿ ನೀಡಿ ವಿದ್ಯಾರ್ಥಿಯ ತಂದೆ ಪದ್ಮನಾಭ ಕಿದೆಬೆಟ್ಟು ಹಾಗೂ ಮನೆಯವರ ಜತೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.
ವಿದ್ಯಾರ್ಥಿಯ ಮೊಬೈಲನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಆತನ ನಾಪತ್ತೆಯ ಕುರಿತು ಯಾವುದೇ ಮಹತ್ವದ ಮಾಹಿತಿ ಲಭ್ಯವಾಗಿಲ್ಲ. ಪೊಲೀಸ್ ಮೂಲಗಳ ಪ್ರಕಾರ, ಆತ ಹುಡುಗಿಯೊಬ್ಬಳ ಜತೆ ನಡೆಸಿದ ಚಾಟಿಂಗ್ ಕೂಡ ಲಭ್ಯವಾಗಿದ್ದು, ಆದರೆ ಅದರಲ್ಲಿ ನಾಪತ್ತೆಯಾಗುವಂತಹ ಯಾವುದೇ ವಿಚಾರಗಳು ಕಂಡುಬಂದಿಲ್ಲ ಎನ್ನಲಾಗಿದೆ.
ತಿರುಗಾಡಿತ್ತು ಕ್ವಾಲಿಸ್ ಕಾರು?
ಈ ನಡುವೆ ಫೆ. 25ರ ರಾತ್ರಿ 7.14ರ ಸುಮಾರು ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಕ್ವಾಲಿಸ್ ಕಾರೊಂದು ತಿರುಗಿ ಹೋಗಿದ್ದು, ಸಿಸಿ ಕೆಮರಾದಲ್ಲಿ ದಾಖಲಾಗಿದೆ.
ಮಾ. 1: ಸ್ವಯಂಪ್ರೇರಿತ ಬಂದ್-ಪ್ರತಿಭಟನೆ
ವಿದ್ಯಾರ್ಥಿ ನಾಪತ್ತೆಯ ಕುರಿತು ವಿಹಿಂಪ, ಬಜರಂಗ ದಳ ಸಂಘಟನೆಗಳು ಗಾಂಜಾ ವ್ಯಸನಿಗಳ ಕೈವಾಡದ ಕುರಿತು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದು, ಆತನನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾಗಿದೆ ಎಂದು ಆರೋಪಿಸಿ ಮಾ. 1ರಂದು ಫರಂಗಿಪೇಟೆಯಲ್ಲಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ. ಜತೆಗೆ ಈ ವೇಳೆ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು ಎಂಬ ಸಂದೇಶಗಳು ಹರಿದಾಡುತ್ತಿವೆ. ಈ ನಡುವೆ ಫೆ. 25ರ ರಾತ್ರಿ 7.14ರ ಸುಮಾರು ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಕ್ವಾಲಿಸ್ ಕಾರೊಂದು ತಿರುಗಿ ಹೋಗಿದ್ದು, ಆ ಕಾರು ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಿ ತನಿಖೆ ಮಾಡುವಂತೆ ಆಗ್ರಹಗಳು ಕೇಳಿ ಬರುತ್ತಿವೆ.
ಡಿಐಜಿಪಿ ಅಮಿತ್ ಸಿಂಗ್ ಭೇಟಿ
ವಿದ್ಯಾರ್ಥಿಯ ಮನೆ ಹಾಗೂ ಆತನ ಚಪ್ಪಲಿ ಪತ್ತೆಯಾದ ರೈಲ್ವೇ ಹಳಿಯ ಜಾಗಕ್ಕೆ ಶುಕ್ರವಾರ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ(ಡಿಐಜಿಪಿ) ಅಮಿತ್ ಸಿಂಗ್ ಅವರು ಭೇಟಿ ನೀಡಿ ಮನೆಯವರೊಂದಿಗೆ ಮಾತುಕತೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ವಿವಿಧ ತಂಡಗಳಾಗಿ ತನಿಖೆ ನಡೆಸುವಂತೆ ಸೂಚನೆಗಳನ್ನು ನೀಡಿದರು. ಈ ವೇಳೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಬಂಟ್ವಾಳ ಡಿವೈಎಸ್‌ಪಿ ವಿಜಯಪ್ರಸಾದ್ ಎಸ್. ಮೊದಲಾದವರಿದ್ದರು.
ಗಾಂಜಾ ವ್ಯಸನಿಗಳ ಕೈವಾಡದ ಸಂಶಯ: ಶರಣ್ ಪಂಪುವೆಲ್
ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ 4 ದಿನ ಕಳೆದರೂ ಆತನ ಪತ್ತೆಯಾಗಿಲ್ಲ. ಫರಂಗಿಪೇಟೆಯ ಸುತ್ತಮುತ್ತ ಡ್ರಗ್ಸ್, ಗಾಂಜಾ ವ್ಯಸನಿಗಳ ಒಂದು ದೊಡ್ಡ ತಂಡವಿದ್ದು, ಹೀಗಾಗಿ ನಾಪತ್ತೆಯ ಕುರಿತು ಸ್ಥಳೀಯರು ಹಲವು ಸಂಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಾಪತ್ತೆಯಲ್ಲಿ ಗಾಂಜಾ ವ್ಯಸನಿಗಳ ತಂಡದ ಕೈವಾಡ ಇರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿ ನಾಪತ್ತೆಯಾದ ಸಮಯದಲ್ಲಿ ಅಪರಿಚಿತ ಕ್ವಾಲಿಸ್ ಕಾರೊಂದು ಆ ಜಾಗದಲ್ಲಿ ಓಡಾಡಿದ್ದು, ಅದು ಶ್ರೀ ಆಂಜನೇಯ ದೇವಸ್ಥಾನದ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಹೀಗಾಗಿ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಿ ವಿದ್ಯಾರ್ಥಿಯನ್ನು ಶೀಘ್ರ ಪತ್ತೆ ಮಾಡಬೇಕು ಎಂದು ವಿಹಿಂಪ ಮುಂದಾಳು ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ.