ಸಂಸದರ ನೇತೃತ್ವದಲ್ಲಿ ಅಧಿಕಾರಿಗಳು, ನೆಲ್ಲಿದಡಿಗುತ್ತು ಪ್ರಮುಖರ ಸಭೆ-ಕಹಳೆ ನ್ಯೂಸ್

ಮಂಗಳೂರು: ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ಸುಮಾರು 800 ವರ್ಷಗಳ ಇತಿಹಾಸವಿರುವ ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ (ಸದ್ಯ ಎಸ್‌ಇಝಡ್ ಒಳಗೆ ಇದೆ) ದೈವಾರಾಧನೆಗೆ ಸಂಬಂಧಿಸಿ ಎಸ್‌ಇಝಡ್ ವಿವಾದ ಸೃಷ್ಟಿಸಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದ ಕ್ಯಾ| ಬ್ರಿಜೇಶ್ ಚೌಟರ ಅಧ್ಯಕ್ಷತೆಯಲ್ಲಿ ಎಸ್‌ಇಝಡ್ ಅಧಿಕಾರಿಗಳು ಮತ್ತು ನೆಲ್ಲಿದಡಿಗುತ್ತಿಗೆ ಸಂಬಂಧಪಟ್ಟವರ ಸಭೆ ನಡೆಯಿತು.
ಎರಡೂ ಕಡೆಯವರ ಅಹವಾಲು ಆಲಿಸಿದ ಸಂಸದರು, ಸೋಮವಾರ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್, ನೆಲ್ಲಿದಡಿಗುತ್ತಿನ ಪ್ರಮುಖರು ಮತ್ತು ವ್ಯವಸ್ಥಾಪನ ಸಮಿತಿಯವರನ್ನೊಳಗೊಂಡ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲು ಸಾಧ್ಯವೇ ಎನ್ನುವ ಬಗ್ಗೆಯೂ ಪರಿಶೀಲಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಎಸ್‌ಇಝಡ್ ಸಿಇಒ ವೆಲ್ನಟಿ ಸೂರ್ಯನಾರಾಯಣ, ಡಿಜಿಎಂ ಸಿವಿಲ್ ನಿಶಾಂತ್, ಮ್ಯಾನೇಜರ್ (ಆರ್‌ಆಯಂಡ್ ಆರ್) ಯೋಗೀಶ್, ಜಯಪ್ರಕಾಶ್, ನೆಲ್ಲಿಕಾರು ಮನೆತನದ ಗಡಿಕಾರರಾದ ಲಕ್ಷ್ಮಣ ಚೌಟ, ಪ್ರಮುಖರಾದ ಧನರಾಜ್ ಶೆಟ್ಟಿ, ನ್ಯಾಯವಾದಿ ಶೈಲೇಶ್ ಚೌಟ, ಸಂಪತ್ ಶೆಟ್ಟಿ, ಸುಮಾನಿ ಶೆಟ್ಟಿ, ಶರಣ್ ಶೆಟ್ಟಿ, ಅಶ್ವಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.