
ಮಂಗಳೂರು: ಅಡ್ಡಹೊಳೆ- ಬಿ.ಸಿ.ರೋಡ್ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿಯ ಪ್ರಮುಖ ಭಾಗಗಳಾದ ಕಲ್ಲಡ್ಕ ಫ್ಲೈಓವರ್, ಮಾಣಿ ಓವರ್‌ಪಾಸ್, ಮೆಲ್ಕಾರ್ ಓವರ್‌ಪಾಸ್, ಪುತ್ತೂರು ಕ್ರಾಸ್ ಓವರ್ ಇತ್ಯಾದಿ ಬಹುತೇಕ ಪೂರ್ಣವಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಸಂಸದ ಕ್ಯಾ| ಬ್ರಿಜೇಶ್ ಚೌಟರ ಅಧ್ಯಕ್ಷತೆ ಯಲ್ಲಿ ಜರಗಿದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್ ಅಜ್ಮಿ ವಿವರಣೆ ನೀಡಿ, ಪ್ರಸ್ತುತ ಕಲ್ಲಡ್ಕ ಫ್ಲೈಓವರ್, ಕೂಡು ರಸ್ತೆಗಳು ಹಾಗೂ ಅಂತಿಮ ಹಂತದ ಕೆಲಸ ನಡೆಯುತ್ತಿದೆ, ಎಪ್ರಿಲ್ ತಿಂಗಳಲ್ಲೇ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಕೆತ್ತಿಕಲ್ ತ್ವರಿತ ಕಾಮಗಾರಿ
ಕೆತ್ತಿಕಲ್‌ನಲ್ಲಿ ಗುಡ್ಡ ಜರಿಯುವುದಕ್ಕೆ ಪರ್ಯಾಯ ವಾಗಿ 10 ದಿನಗಳೊಳಗೆ ಕೆಲಸ ಆರಂಭಿಸುವಂತೆ ಫೆ.22ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲೇ ಸೂಚಿಸಲಾಗಿದ್ದರೂ ಇದುವರೆಗೆ ಕೆಲಸ ಆರಂಭಿಸಿಲ್ಲ ಎಂದು ಜಿಲ್ಲಾಧಿಕಾರಿ ಗಮನ ಸೆಳೆದರು. ಪರ್ಯಾಯವಾಗಿ ಏನು ಮಾಡಬಹುದು ಎನ್ನುವ ಬಗ್ಗೆ ತಜ್ಞರ ವರದಿ ಇನ್ನೂ ಬಂದಿಲ್ಲ ಎಂದು ಎನ್‌ಎಚ್‌ಎಐಯ ಅಬ್ದುಲ್ಲ ತಿಳಿಸಿದಾಗ ವರದಿ ಬರುವ ವರೆಗೆ ಕಾದರೆ ಮಳೆಗಾಲ ಬಂದು ಸಮಸ್ಯೆಯಾಗಬಹುದು, ಪರ್ಯಾಯವಾಗಿ ವೈರ್‌ವೆುಷ್ ಹಾಕುವ ಗೇಬಿಯನ್ ವಾಲ್ ಮಾಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ ಕಾಮಗಾರಿ ಯಲ್ಲಿ ಸುಮಾರು 39 ಕಿ.ಮೀ.ನಷ್ಟು ಭಾಗ ಕಾಮಗಾರಿಗೆ ಲಭ್ಯವಾಗಿದೆ. ಅದರಲ್ಲಿ 25 ಕಿ.ಮೀ.ನಷ್ಟು ಹೆದ್ದಾರಿ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು. ಮೂಲ್ಕಿಯಿಂದ ತಲಪಾಡಿವರೆಗಿನ ಎನ್‌ಎಚ್ 66ರ 4 ಕಡೆ ಸರ್ವಿಸ್ ರಸ್ತೆ ಕಾಮಗಾರಿ ಮಳೆಗಾಲದ ಬಳಿಕ ಆರಂಭಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಹೆಜಮಾಡಿಯಲ್ಲಿ ಸ್ಥಳೀಯರಿಗೆ ಟೋಲ್ ಬೇಡ: ಶಾಸಕ ಕೋಟ್ಯಾನ್
ಉಡುಪಿಯಲ್ಲಿ ಈಗಾಗಲೇ ಸ್ಥಳೀಯರಿಗೆ ಟೋಲ್ ಮುಕ್ತಗೊಳಿಸುವ ಕಾರ್ಯ ನಡೆದಿದ್ದು, ಹೆಜಮಾಡಿ ಟೋಲ್‌ನಲ್ಲೂ ಹೆಜಮಾಡಿ ಗ್ರಾ.ಪಂ. ಹಾಗೂ ಮೂಲ್ಕಿ ನಗರ ಪಂಚಾಯತ್ ನಿವಾಸಿಗಳಿಗೆ ಟೋಲ್ ಮುಕ್ತಗೊಳಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಸಂಬಂಧಪಟ್ಟವರ ಸಭೆ ಕರೆದು ತೀರ್ಮಾನಿಸಿ ಎಂದು ಸಂಸದರು ಸಲಹೆ ನೀಡಿದರು.
ಸಭೆಯಲ್ಲಿ ಶಾಸಕರಾದ ಭಾಗೀರಥಿ, ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಜಿ.ಪಂ ಸಿಇಒ ಡಾ. ಆನಂದ್, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಆಯಂಟನಿ ಮರಿಯಪ್ಪ, ಡಿಸಿಪಿ ಸಿದ್ಧಾರ್ಥ್ ಗೋಯಲ್ ಉಪಸ್ಥಿತರಿದ್ದರು.
ವಿದ್ಯುತ್‌ಗೆ ದಿಢೀರ್ ಬೇಡಿಕೆ ಏರಿಕೆ, ಲೋಡ್‌ಶೆಡ್ಡಿಂಗ್
ದ.ಕ.ದಲ್ಲಿ ಆಗಾಗ ವಿದ್ಯುತ್ ಕಡಿತ ಮಾಡಲಾ ಗುತ್ತಿದ್ದು, ಮೆಸ್ಕಾಂ ವಿದ್ಯುತ್ ಕೊರತೆಯನ್ನು ಎದುರಿಸುತ್ತಿ ದೆಯೇ ಎಂದು ಶಾಸಕ ಹರೀಶ್ ಪೂಂಜ ಪ್ರಶ್ನಿಸಿದರು. ಮೆಸ್ಕಾಂ ಚೀಫ್ ಎಂಜಿನಿಯರ್ ರವಿಕಾಂತ್ ಪ್ರತಿಕ್ರಿಯಿಸಿ, ಕೆಲವು ದಿನಗಳಿಂದ ಬಿಸಿಗಾಳಿ ತೀವ್ರವಾಗಿದೆ. ಇದರಿಂದ ವಿದ್ಯುತ್ ಬೇಡಿಕೆ ತೀರಾ ಹೆಚ್ಚಿದೆ. ಲೋಡ್ ಹೆಚ್ಚಿರುವುದರಿಂದ ಉಪಕರಣಗಳು ಹಾನಿಗೀಡಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲೋಡ್‌ಶೆಡ್ಡಿಂಗ್ ಮಾಡಲಾಗಿದೆ ಎಂದರು.