ಸ್ಪ್ಲೆಂಡರ್ ಬೈಕ್, ಆಯಕ್ಟಿವಾಗಳೇ ಟಾರ್ಗೆಟ್; ಅಂತರ್ ಜಿಲ್ಲಾ ಕಳ್ಳನ ಸಹಿತ ನಾಲ್ವರ ಬಂಧನ-ಕಹಳೆ ನ್ಯೂಸ್

ಮಂಗಳೂರು: ಜಾತ್ರೆ, ಕಂಬಳ, ಮಾಲ್, ಬಸ್ಸು, ರೈಲ್ವೆ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಕದಿಯುತ್ತಿದ್ದ ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಶಿವಮೊಗ್ಗ ಜಿಲ್ಲೆಯ ಸೊರಬದ ಮಣಿಕಂಠ ಗೌಡ ಕೆ. (24) ಬಂಧಿತ ಆರೋಪಿ. ಈತನಿಂದ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕದ್ದ ಬೈಕ್‌ಗಳನ್ನು ಮಣಿಕಂಠನಿಂದ ಖರೀದಿ ಮಾಡುತ್ತಿದ್ದ ಕಾರ್ಕಳದ ಸತೀಶ್ ಬಂಗೇರ, ಮೂಡುಬಿದಿರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ವಾಹನಗಳನ್ನು ಪಡೆದು ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಈತ ಮಂಗಳೂರು ನಗರ ಪೊಲೀಸ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಬೈಕ್ ಕಳವು ಮಾಡುತ್ತಿದ್ದ. ಕದ್ದ ಕೆಲವು ಬೈಕ್‌ಗಳನ್ನು ಮೂಡುಬಿದಿರೆಯಲ್ಲಿ ಬಚ್ಚಿಟ್ಟುಕೊಂಡಿದ್ದ.
ಸ್ಪ್ಲೆಂಡರ್ ಬೈಕ್, ಆಯಕ್ಟಿವಾಗಳೇ ಟಾರ್ಗೆಟ್
ಸ್ವತಃ ಮೆಕಾನಿಕ್ ಆಗಿದ್ದ ಈತ ಇಗ್ನಿಷನ್ ಸಾಕೆಟ್‌ನ ಪ್ಲಗನ್ನು ಚಾಕಚಕ್ಯತೆಯಿಂದ ತಪ್ಪಿಸಿ, ಕ್ಷಣಾರ್ಧದಲ್ಲಿ ಕಳ್ಳತನ ಮಾಡಿಕೊಂಡು ಹೋಗುತಿದ್ದ. ರೀಸೇಲ್ ವ್ಯಾಲ್ಯೂ ಇರುವ ಬೈಕ್‌ಗಳ ಕದಿಯುತ್ತದ್ದ ಆತನ ಹೆಚ್ಚಾಗಿ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಜತೆಗೆ ಆಯಕ್ಟಿವಾ ಸ್ಕೂಟರ್ ಕೂಡಾ ಕದಿಯುತ್ತಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ.
ವಿವಿಧ ಠಾಣೆಗಳಲ್ಲಿ ಪ್ರಕರಣ
ಮಣಿಕಂಠ ಸೊರಬ ಮೂಲದವನಾಗಿದ್ದರೂ, ಮೂರ್ನಾಲ್ಕು ವರ್ಷದಿಂದ ಕುಟುಂಬದೊಂದಿಗೆ ಮೂಡುಬಿದಿರೆಯಲ್ಲಿ ವಾಸವಿದ್ದ. ಮಂಗಳೂರಿನ ಬಂದರು, ಪಾಂಡೇಶ್ವರ, ಬಜಪೆ, ಮೂಲ್ಕಿ, ಉಳ್ಳಾಲ, ಕಂಕನಾಡಿ ನಗರ ಠಾಣೆ ವ್ಯಾಪ್ತಿಯ 15 ಪ್ರಕರಣ ಮತ್ತು ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ 5 ಪ್ರಕರಣ ಸೇರಿ 20 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲ ನಾಲ್ವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.