ನವದೆಹಲಿ: 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೊಸಾ ಭಾರತಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ.
ಸಿರಿಲ್ ರಮಫೊಸಾ ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಸಿರಿಲ್ ರಮಫೊಸಾ ಗಾಂಧಿವಾದಿಗಳಾಗಿದ್ದು, ಇದೇ ಕಾರಣಕ್ಕೆ ಭಾರತ ಸರ್ಕಾರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ.
ಈ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಭಾರತ ಸರ್ಕಾರ ನೀಡಿದ ಆಮಂತ್ರಣವನ್ನು ಅವರು ನಿರಾಕರಿಸಿದ್ದರು. ಅಂದು ಟ್ರಂಪ್ ಅವರು ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೇ ಬೇಕಾಗಿದ್ದರಿಂದ ಭಾರತಕ್ಕೆ ಭೇಟಿಕೊಡಲು ಆಗುವುದಿಲ್ಲ ಎಂದು ವೈಟ್ಹೌಸ್ ಮಾಧ್ಯಮಗಳಿಗೆ ಮಾಹಿತಿ ನೀಡಿತ್ತು.
ರಾಮಫೋಸಾ ಅವರು ಅಧ್ಯಕ್ಷರಾಗುವ ಮೊದಲು, ವರ್ಣಭೇದ ನೀತಿ ವಿರೋಧಿ ಸಂಘಟನೆಯ ಕಾರ್ಯಕರ್ತರಾಗಿದ್ದರು. ಅವರೊಬ್ಬ ಉದ್ಯಮಿಯಾಗಿ ಹಾಗೂ ಕಾರ್ಮಿಕ ಒಕ್ಕೂಟದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. 2014 ರಿಂದ 2018 ರವರೆಗೆ ದಕ್ಷಿಣಾಫ್ರಿಕಾದ ಉಪಾಧ್ಯಕ್ಷರಾಗಿದ್ದರು.