
ಮಂಗಳೂರು: ಸಾರ್ವಜನಿಕರ ಜೀವಕ್ಕೆ ಮಾರಕವಾಗಬಲ್ಲ ಪ್ಲಾಸ್ಟಿಕ್ ಫ್ಲೆಕ್ಸ್‌ಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಪಾಲಿಕೆ ಹಾಗೂ ಸ್ಥಳೀಯಾಡಳಿತಗಳಿಗೆ ದ.ಕ. ಜಿಲ್ಲಾಡಳಿತ ಸೂಚನೆ ನೀಡಿದೆ. ಅನಧಿಕೃತ ಬ್ಯಾನರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
ನಗರದಲ್ಲಿ ಬ್ಯಾನರ್ ಹಾವಳಿ ಮಿತಿ ಮೀರುತ್ತಿದ್ದಂತೆ ಅವುಗಳ ನಿಯಂತ್ರಣಕ್ಕೆ ಪಾಲಿಕೆ ತೆರವು ಕಾರ್ಯಾಚರಣೆ ನಡೆಸಿದೆ. ಜತೆಗೆ ಎಚ್ಚರಿಕಾ ಫಲಕಗಳನ್ನು ಅಳವಡಿಸಿದ ಲಾಲ್‌ಬಾಗ್, ಪಂಪ್‌ವೆಲ್ ಜಂಕ್ಷನ್‌ಗಳನ್ನು ಬ್ಯಾನರ್ ಮುಕ್ತವಾಗಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ಹಂತವಾಗಿ ದಂಡಾಸ್ತ್ರ ಪ್ರಯೋಗಕ್ಕೆ ಪಾಲಿಕೆ ಸಜ್ಜಾಗುತ್ತಿದೆ. ಮುದ್ರಕರಿಗೂ ಬಿಸಿಮುಟ್ಟಿಸುವ ಕ್ರಮಕ್ಕೂ ಪಾಲಿಕೆಯಲ್ಲಿ ತಯಾರಿಗಳಾಗುತ್ತಿವೆ. ಈ ನಡುವೆ ಜಿಲ್ಲಾಡಳಿತ ಕೂಡ ಬ್ಯಾನರ್ ನಿಯಂತ್ರಿಸುವ ಪಾಲಿಕೆಯ ಕ್ರಮಕ್ಕೆ ಬೆಂಗಾವಲಾಗಿ ನಿಂತಿದೆ.
ಮುಖ್ಯರಸ್ತೆ, ಜಂಕ್ಷನ್‌ಗಳಲ್ಲಿ ಅಳವಡಿಸಿದ ಬ್ಯಾನರ್‌ಗಳು ರಸ್ತೆಗೆ ಬೀಳುವುದು ಸೇರಿದಂತೆ ವಿವಿಧ ರೀತಿಯ ಅನಾಹುತಗಳಿಗೆ ಕಾರಣವಾಗುವ ಸಾಧ್ಯತೆ ಅಧಿಕ. ಇದರಿಂದಾಗಿ ಬ್ಯಾನರ್‌ಗಳ ಮೇಲೆ ನಿಯಂತ್ರಣ ಅಗತ್ಯ ಎಂಬುವುದು ಜಿಲ್ಲಾಡಳಿತದ ವಾದ. ಬ್ಯಾನರ್ ವಿಚಾರ ದಲ್ಲಿ ಸ್ಥಳೀಯಾಡಳಿತಗಳು ನೀಡುವ ಸೂಚನೆಗಳನ್ನು ಸಾರ್ವಜನಿಕರು ಕಡ್ಡಾಯ ವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉದಯವಾಣಿಗೆ ವಿವರಿಸಿದರು.
ಮಿತಿ ಮೀರುತ್ತಿರುವ ಬ್ಯಾನರ್ ಹಾವಳಿಗೆ ನಿಯಂತ್ರಣ ಅಗತ್ಯ. ಇದರಿಂದ ವಾಹನಗಳ ಅಪಘಾತ, ಸೇರಿದಂತೆ ಪಾದಚಾರಿಗಳ ಜೀವಕ್ಕೂ ಅಪಾಯಕಾರಿ. ಸ್ಥಳೀಯಾಡಳಿತಗಳು ಇವುಗಳ ಮೇಲೆ ನಿಗಾ ಇರಿಸಬೇಕು. ಮಂಗಳೂರಿನಲ್ಲಿ ಅನಧಿಕೃತ ಬ್ಯಾನರ್‌ಗಳ ಸಂಖ್ಯೆ ಹೆಚ್ಚಳವಾಗಿದ್ದು, ಇದರ ವಿರುದ್ಧ ಕ್ರಮಕ್ಕೆ ಪಾಲಿಕೆಗೆ ಸೂಚಿಸಲಾಗಿದೆ. ಫ್ಲೆಕ್ಸ್ ಹಾವಳಿ ನಿಯಂತ್ರಣಕ್ಕೆ ಪಾಲಿಕೆ ಕೈಗೊಳ್ಳುವ ನಿರ್ಧಾರಕ್ಕೆ ಜಿಲ್ಲಾಡಳಿತ ಸಹಕರಿಸಲಿದೆ. ಸಾರ್ವಜನಿಕರು ಸ್ಥಳೀಯಾಡಳಿತದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
– ಮುಲ್ಲೈ ಮುಗಿಲನ್ ಎಂ.ಪಿ.,ದ.ಕ. ಜಿಲ್ಲಾಧಿಕಾರಿ
ಫ್ಲೆಕ್ಸ್‌ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ ಸ್ಥಳೀಯಾಡಳಿತ ಕ್ರಮ ವಹಿಸಲಿದೆ. ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ದೂರು ನೀಡಬಹುದು. ಅಧಿಕಾರಿಗಳು ಹಾಗೂ ಸಾರ್ವಜನಿಕರು ನೀಡುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸುತ್ತೇವೆ.