ಬೆಂಗಳೂರು: ಸ್ಪೀಕರ್ ಕಚೇರಿ ಮತ್ತು ಸರ್ಕಾರದ ತಿಕ್ಕಾಟದ ನಡುವೆಯೇ ನಡೆಯುತ್ತಿರುವ ವಿಧಾನಸೌಧ ವಜ್ರಮಹೋತ್ಸವ ಸವಿನೆನಪಿಗಾಗಿ ಶಾಸಕರಿಗೆ ತಲಾ ₹ 50,000 ಮೌಲ್ಯದ ಚಿನ್ನದ ಬಿಸ್ಕತ್, ಸಿಬ್ಬಂದಿಗೆ ತಲಾ ₹ 5,000 ಮೌಲ್ಯದ ಬೆಳ್ಳಿ ತಟ್ಟೆ ಉಡುಗೊರೆಯಾಗಿ ನೀಡಲು ಉದ್ದೇಶಿಸಲಾಗಿದೆ.
ವಿಧಾನಮಂಡಲದ ಉಭಯ ಸದನಗಳ 300 ಸದಸ್ಯರಿಗೆ ವಿಧಾನಸೌಧದ ಲಾಂಛನ ಒಳಗೊಂಡಿರುವ ಚಿನ್ನದ ಬಿಸ್ಕತ್‌ಗಳನ್ನು ಕೊಡಲು ಚಿಂತಿಸಲಾಗಿದೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ರಾಜಭವನ ಮತ್ತು ವಿಶ್ವೇಶ್ವರಯ್ಯ ಗೋಪುರಗಳಲ್ಲಿ ಕೆಲಸ ಮಾಡುವ ಸುಮಾರು ಐದು ಸಾವಿರ ಸಿಬ್ಬಂದಿಗೆ ಬೆಳ್ಳಿ ತಟ್ಟೆಗಳನ್ನು ನೀಡಲಾಗುತ್ತಿದೆ ಎಂದೂ ಮೂಲಗಳು ಹೇಳಿವೆ.
ಎರಡು ದಿನಗಳ ಸಮಾರಂಭಕ್ಕಾಗಿ ₹ 27 ಕೋಟಿ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದ್ದು, ಉಡುಗೊರೆಗೆ ಸುಮಾರು ₹ 3 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ. ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗಿದೆ. ಈ ಬಗ್ಗೆ ವಿಧಾನಸಭೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕಚೇರಿಯ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ.
ಶಾಸಕರು, ಸಚಿವರು, ಸಿಬ್ಬಂದಿ ಮತ್ತು ಅತಿಥಿಗಳ ಊಟೋಪಚಾರ ವ್ಯವಸ್ಥೆಯನ್ನು ವಿಧಾನಸೌಧದ ಸಮೀಪದಲ್ಲಿರುವ ಪಂಚತಾರ ಹೊಟೇಲ್‌ಗೆ ವಹಿಸಲಾಗುತ್ತಿದೆ. ಎರಡನೇ ದಿನ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಗಾಯಕ ರಿಕಿ ಕೇಜ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. 300 ಸಹ ಕಲಾವಿದರೊಂದಿಗೆ ರಿಕಿ ಹಾಡಲಿದ್ದಾರೆ.
ವಿಕಾಸಸೌಧ ಹಾಗೂ ವಿಧಾನಸೌಧದ ಮಧ್ಯದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸಂಗೀತ ಕಾರ್ಯಕ್ರಮಕ್ಕಾಗಿ ವಿಶೇಷ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ದೆಹಲಿ ಗುತ್ತಿಗೆದಾರರೊಬ್ಬರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಮೊದಲ ದಿನ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ.
₹ 1.75 ಕೋಟಿ ವೆಚ್ಚದಲ್ಲಿ ವಿಧಾನಸೌಧದ ದೀಪಾಲಂಕಾರ, ಹೂವಿನ ಅಲಂಕಾರ ವೇದಿಕೆ, ಧ್ವನಿವರ್ಧಕಗಳ ವ್ಯವಸ್ಥೆ ಮಾಡಲಾಗುತ್ತಿದೆ. ಬೆಂಗಳೂರು ನಗರ ಒಳಗೊಂಡಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ದೊಡ್ಡ ದೊಡ್ಡ ಜಾಹಿರಾತು ಫಲಕಗಳನ್ನು ಹಾಕಲು ಉದ್ದೇಶಿಸಲಾಗಿದೆ. ರಾಜಧಾನಿಯಲ್ಲೇ 160 ಕಡೆ ಇಂಥ ಜಾಹಿರಾತು ಫಲಕಗಳು ರಾರಾಜಿಸಲಿವೆ.
ಖ್ಯಾತ ನಿರ್ದೇಶಕರಾದ ಟಿ.ಎನ್.ಸೀತರಾಂ, ಗಿರೀಶ್ ಕಾಸರವಳ್ಳಿ ಮತ್ತು ಮಾಸ್ಟರ್ ಕಿಷನ್ ವಿಧಾನಸೌಧ, ವಿಧಾನಪರಿಷತ್ ಕುರಿತು ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ ₹ ಮೂರು ಕೋಟಿ ಖರ್ಚು ಮಾಡಲಾಗಿದೆ. ಶಾಸಕರು, ಸಿಬ್ಬಂದಿ ಹಾಗೂ ಗಣ್ಯರ ಊಟೋಪಚಾರಕ್ಕಾಗಿ ಸಿಕ್ಕಾಪಟ್ಟೆ ಖರ್ಚು ಮಾಡಲಾಗುತ್ತಿದೆ ಎಂದೂ ಮೂಲಗಳು ವಿವರಿಸಿವೆ.
ಬಗೆಹರಿಯದ ಬಿಕ್ಕಟ್ಟು
ವಿಧಾನಮಂಡಲ ಅಧಿವೇಶನಕ್ಕೆ 10ದಿನ ಮಾತ್ರ ಉಳಿದಿದ್ದು, ವಿಧಾನಸಭೆ ಅಧ್ಯಕ್ಷರ ಕಚೇರಿ ಕಳುಹಿಸಿರುವ ಹಣಕಾಸು ಪ್ರಸ್ತಾವಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿಲ್ಲ. ಇಷ್ಟೊಂದು ಹಣ ಏಕೆ ಖರ್ಚು ಮಾಡಬೇಕು ಎಂಬ ಕುರಿತು ವಿವರಣೆ ಕೇಳಿದೆ. ಸ್ಪೀಕರ್ ಕಚೇರಿ ಜತೆಗಿನ ತಿಕ್ಕಾಟದಿಂದಾಗಿ ಈ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆಸುತ್ತಿರುವ ಎರಡು ದಿನಗಳ ವಜ್ರ ಮಹೋತ್ಸವ ಸಮಾರಂಭದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದೂ ಮೂಲಗಳು ಖಚಿತಪಡಿಸಿವೆ.
ಹೆಂಗಿದ್ರೂ ಟೀಕೆ ಮಾಡ್ತಾರೆ…
‘ಜನ ಬಟ್ಟೆ ಹಾಕ್ಕೊಂಡ್ರು ಟೀಕಿಸ್ತಾರೆ, ಹಾಕಿಕೊಳ್ದೆ ಇದ್ರೂ ಟೀಕಿಸ್ತಾರೆ. ಈ ಜನ ಮಹಾತ್ಮಾಗಾಂಧಿ ಅವರನ್ನೇ ಬಿಡಲಿಲ್ಲ. ಇನ್ನು ನಮ್ಮನ್ನು ಬಿಡುವರೇ’ ಎಂದು ವಿಧಾನಸಭಾಧ್ಯಕ್ಷ ಕೆ.ಬಿ ಕೋಳಿವಾಡ ಪ್ರತಿಕ್ರಿಯಿಸಿದ್ದಾರೆ.
‘ನಾವು ₹ 27 ಕೋಟಿಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಅದನ್ನು ಒಪ್ಪುವುದು ಬಿಡುವುದು ಮುಖ್ಯಮಂತ್ರಿಗೆ ಬಿಟ್ಟಿದ್ದು. ₹ 27 ಕೋಟಿ ಬೇಡ 15 ಲಕ್ಷದಲ್ಲಿ ಊಟ ಹಾಕಿ ಕಳುಹಿಸಿ ಎಂದ್ರೂ ಪರ್ವಾಗಿಲ್ಲ. ಹಾಗೇ ಮಾಡ್ತೀವಿ’ ಎಂದೂ ಅವರು ಹೇಳಿದ್ದಾರೆ.
‘ಶಾಸಕರಿಗೆ ಚಿನ್ನದ ಬಿಸ್ಕತ್ ಉಡುಗೊರೆ ನೀಡುವ ಪ್ರಸ್ತಾವನೆ ಇಟ್ಟಿದ್ದೇವೆ. ಬೇಡ ಅಂದ್ರೆ ಕೈಬಿಡುತ್ತೇವೆ’ ಎಂದೂ ಕೋಳಿವಾಡ ಸ್ಪಷ್ಟಪಡಿಸಿದ್ದಾರೆ.
* ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಬೆಂಗಳೂರಿನಲ್ಲಿ ಸಾವು– ನೋವು ಸಂಭವಿಸಿರುವಾಗ 27 ಕೋಟಿ ಖರ್ಚು ಮಾಡುವುದು ಸರಿಯಲ್ಲ
-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ
* ಯಾರು, ಯಾವ ಕಾರಣಕ್ಕೆ ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಹೇಳಬೇಕು. ಲೆಕ್ಕ ಕೇಳಲು ನೀವ್ಯಾರು ಎಂಬ ಧೋರಣೆ ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ