ಖಾಸಗಿ ಕಾರ್ಯಕ್ರಮ ನಡೆಯುತ್ತಿದ್ದ ಐಶಾರಾಮಿ ಬಂಗಲೆಯಲ್ಲಿ ಅಗ್ನಿ ಅವಘಡ-ಕಹಳೆ ನ್ಯೂಸ್

ಮಂಗಳೂರು: ಖಾಸಗಿ ಕಾರ್ಯಕ್ರಮ ನಡೆಯುತ್ತಿದ್ದ ಐಶಾರಾಮಿ ಬಂಗಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಗರದ ಲೇಡಿಹಿಲ್ ನ ಗಾಂಧಿನಗರ ಬಳಿ ಘಟನೆ ಬುಧವಾರ(ಮಾ.12) ಸಂಭವಿಸಿದೆ.
ಗಾಂಧಿ ನಗರದಲ್ಲಿರುವ ಖಾಸಗಿ ಬಾಡಿಗೆ ಬಂಗಲೆಯಲ್ಲಿ ಈ ಅವಘಡ ಸಂಭವಿಸಿದ್ದು ಎ.ಸಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬುಧವಾರ ಮಧ್ಯಾಹ್ನದ ವೇಳೆ ಅಡುಗೆ ಕೋಣೆಯ ಪಕ್ಕದ ಕೊಠಡಿಯಲ್ಲಿ ಎ.ಸಿ. ಸರ್ಕ್ನೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಮನೆಯನ್ನು ವ್ಯಾಪಿಸಿಕೊಂಡಿದ್ದು, ಭಾಗಶಃ ಮನೆಗೆ ಹಾನಿ ಸಂಭವಿಸಿದೆ.
ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು ಎಸಿ, ಫ್ರಿಡ್ಜ್, ಬಟ್ಟೆಗಳು ಮರದ ಪೀಠೊಪಕರಣಗಳು ಬೆಂಕಿಗಾಹುತಿಯಾಗಿವೆ. ಸುಮಾರು 20 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯೊಳಗೆ ಯಾರೂ ಇಲ್ಲದ ಕಾರಣದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಮರದ ಮೇಲ್ಛಾವಣಿ, ಹಂಚಿನ ಮನೆ ಹಳೆ ಕಾಲದ ವಿನ್ಯಾಸ ಹೊಂದಿದ್ದ ಮನೆಯಾಗಿದ್ದು, ಹಂಚಿನ ಮೇಲ್ಛಾವಣಿ ಹೊಂದಿತ್ತು. ಮರದ ಪಕ್ಕಾಸುಗಳು, ಹಲಗೆಗಳಿಂದ ಸೀಲಿಂಗ್ ಮಾಡಲಾಗಿತ್ತು. ಇದರಿಂದಾಗಿ ಬೆಂಕಿ ಕೆನ್ನಾಲಗೆ ವೇಗವಾಗಿ ವ್ಯಾಪಿಸಿಕೊಂಡಿದೆ. ಪಕ್ಕದ ಅಡುಗೆ ಕೋಣೆಗೂ ಬೆಂಕಿ ಹರಡಿಕೊಂಡಿದ್ದು, ಹಲವು ಉಪಕರಣಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಕದ್ರಿ ಹಾಗೂ ಪಾಂಡೇಶ್ವರ ಅಗ್ನಿ ಶಾಮಕ ದಳ ಸಿಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.