ತಾಲ್ಲೂಕು ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಅಶೋಕ್ ಕುಮಾರ್ ರೈ-ಕಹಳೆ ನ್ಯೂಸ್

ಪುತ್ತೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗಾಗಿ ಜಾಗ ನೀಡಿ ವರ್ಷಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಸಾಮೆತ್ತಡ್ಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಗೆ ಟೆಂಟರ್ ಆಗಲು 1 ವರ್ಷ 7 ತಿಂಗಳು ಆಗಿದೆ ಎಂದಾದರೆ ಕಾಮಗಾರಿ ಆಗಲು ಎಷ್ಟು ವರ್ಷ ಬೇಕಾದೀತು.
ಇದನ್ನು ಫೋಲೊ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ತಾಲ್ಲೂಕು ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಪುತ್ತೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು, ಸಾಮೆತ್ತಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಯ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರನ್ನು ತರಾಟೆಗೆ ತೆಗೆದುಕೊಂಡು, ಆದಷ್ಟು ಬೇಗ ಕೆಲಸ ಆಗಬೇಕು ಎಂದು ಎಚ್ಚರಿಸಿದರು.
ಬಡಗನ್ನೂರು, ಹಿರೇಬಂಡಾಡಿ ಮತ್ತು ಕರ್ನೂರಿನಲ್ಲಿ ಪ್ರಾಥಮಿಕ ಉಪ ಆರೋಗ್ಯಕೇಂದ್ರಗಳ ಪೈಕಿ ಬಡಗನ್ನೂರನ್ನು ಹೊರತುಪಡಿಸಿ ಉಳಿದ ಎರಡು ಕೇಂದ್ರಗಳ ಕಾಮಗಾರಿ ಆರಂಭವಾಗಿದೆ. ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ಸರ್ಕಾರ ಉಳ್ಳಾಲಕ್ಕೆ ಕಳುಹಿಸಿರುವುದರಿಂದ ವೈದ್ಯಾಧಿಕಾರಿಯ ಕೊರತೆ ಇದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಮಾಹಿತಿ ನೀಡಿದರು. ಇಲ್ಲಿ ಸಂಬಳ ಪಡೆದುಕೊಂಡು ಅವರು ಉಳ್ಳಾಲದಲ್ಲಿ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುವುದು ಬೇಡ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿ ಎಂದ ಶಾಸಕರು, ಕೆಮ್ಮಿಂಜೆ ಹೊರತುಪಡಿಸಿ ಉಳಿದ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳ ಕಾಮಗಾರಿಗಳನ್ನು ಶೀಘ್ರವಾಗಿ ನಡೆಸುವಂತೆ ಸೂಚಿಸಿದರು.
ನೀರಿನ ಸಮಸ್ಯೆಗೆ ಪಿಡಿಒಗಳೇ ಹೊಣೆ
ಯಾವುದೇ ಕಡೆಗಳಲ್ಲಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾದರೆ ಟ್ಯಾಂಕರಿನಲ್ಲಿ ನೀರು ಸರಬರಾಜು ಮಾಡಬೇಕು. ನೀರಿನ ವಿಚಾರದಲ್ಲಿ ಜನತೆಗೆ ಸಮಸ್ಯೆಯಾದಲ್ಲಿ ಆಯಾ ಭಾಗದ ಪಿಡಿಓಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ ಶಾಸಕರು, ಕುಡಿಯುವ ನೀರಿಗಾಗಿ ಕಳೆದ ಸಲ ಮಂಜೂರಾದ ₹ 1.5 ಕೋಟಿ ಅನುದಾನ ವರ್ಕ್ ಆರ್ಡರ್ ನೀಡದ ಕಾರಣ ಲ್ಯಾಪ್ಸ್ ಆಗಿದೆ ಎಂದು ಇಲಾಖೆಯ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಈ ಹಿಂದೆ ಇದ್ದ ಎಲ್ಲಾ ನೀರಿನ ಟ್ಯಾಂಕ್ಗಳಿಗೆ ಪೈಪ್ಲೈನ್ ವ್ಯವಸ್ಥೆ ಮಾಡಬೇಕು. ಕೆಲವು ಕಡೆಗಳಲ್ಲಿನ ಟ್ಯಾಂಕ್ಗಳು ಶಿಥಿಲಾವಸ್ಥೆಯಲ್ಲಿದೆ ಎನ್ನುವ ಕಾರಣಕ್ಕಾಗಿ ಅಲ್ಲಿಗೆ ಪೈಪ್ ಲೈನ್ ಅಳವಡಿಸುವುದನ್ನು ಕೈಬಿಡಬಾರದು. ಜೆಜೆಎಂ ಯೋಜನೆಯಡಿ ಕೆಲವು ಕಡೆಗಳಲ್ಲಿ ಟ್ಯಾಂಕ್ಗಳೇ ಇಲ್ಲ. ಡಿಪಿಆರ್ ಮಾಡುವಾಗ ಎಲ್ಲಿ ಬಿಟ್ಟಿದ್ದಾರೆ ಎಂಬುವುದನ್ನು ತಿಳಿದುಕೊಂಡು ಅದನ್ನು ಸೇರಿಸಿಕೊಳ್ಳಬೇಕು. ಯೋಜನೆಯ ಕೆಲಸಗಳು ಶೇ 100ರಷ್ಟು ಪರಿಪೂರ್ಣವಾಗಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಪ್ರಸ್ತುತವಿರುವ ನೀರಿನ ಟ್ಯಾಂಕ್ಗಳಿಗೆ ಪೈಪ್ಲೈನ್ ಅಳವಡಿಸದಿದ್ದರೆ ಅದಕ್ಕೆ ನೀವೇ ಹೊಣೆ ಎಂದು ಎಚ್ಚರಿಸಿದರು. ಅಮೃತ ಯೋಜನೆಯ 2021-21ನೇ ಸಾಲಿನ ಕಾಮಗಾರಿ ಬಾಕಿಯಾಗಿರುವ ಕುರಿತು ಮಾತನಾಡಿದ ಶಾಸಕರು, ಕೆಆರ್ಡಿಎಲ್ ಬಗ್ಗೆ ತುಂಬಾ ಆರೋಪಗಳಿದ್ದು, ಕೆಲಸವನ್ನು ಸರಿಯಾಗಿ ಮಾಡದೇ ಇದ್ದಲ್ಲಿ ಮುಂದೆ ಕೆಲಸವೇ ಕೊಡುವುದಿಲ್ಲ ಎಂದರು.
ರೂ. 5 ಕೋಟಿಯ ಕೌಡಿಚ್ಚಾರು-ಕೆಯ್ಯೂರು ರಸ್ತೆ ಕಾಮಗಾರಿ ಆರಂಭಗೊಂಡಿದೆ. ಬೊಳುವಾರು- ಹಾರಾಡಿಯ ರೂ. 20ಕೋಟಿಯ ಚತುಷ್ಪಥ ರಸ್ತೆ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ.ಸಾರಡ್ಕ-ಪರಿಯಲ್ತಡ್ಕ 4 ಕಿ. ಮೀ. ರಸ್ತೆ ಅಭಿವೃದ್ಧಿ ಆಗಬೇಕಿದೆ. ತೋರಣಕಟ್ಟೆಯಲ್ಲಿ ಸೇತುವೆ ನಿಮರ್ಾಣದ ಅಗತ್ಯವಿದೆ ಎಂದು ು ಲೊಕೋಪಯೋಗಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು. ನಿರ್ಣಯಗಳನ್ನು ಸರಿಯಾಗಿ ಜಾರಿಗೊಳಿಸಬೇಕು ಎಂದು ಶಾಸಕರು ಸೂಚಿಸಿದರು.
ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಗ್ಯಾರಂಟಿ ಅನುಷ್ಠಾನದ ತಾಲ್ಲೂಕು ಸಮಿತಿಯ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆನರ್ೆ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ಕುಮಾರ್ ಭಂಡಾರಿ, ನಗರಸಭೆಯ ಪೌರಾಯುಕ್ತ ಮಧು.ಎಸ್.ಮನೋಹರ್ ಇದ್ದರು.