ನಟನೆ, ನಿರೂಪಣೆ ಎಲ್ಲದಕ್ಕೂ ಸೈ ಪ್ಯಾಕು ಪ್ಯಾಕು…!! ಹಿತೇಶ್ ಕಾಪಿನಡ್ಕ ಎಂಬ ಸಕಲಕಲಾ ವಲ್ಲಭ..!! – ಕಹಳೆ ನ್ಯೂಸ್

ಅಕ್ಕಾ ಮೀನ್ ಬೋಡೆ.. ಪ್ಯಾಕು ಪ್ಯಾಕು ಪ್ಯಾಕು ಈ ಡೈಲಾಗ್ ಕೇಳಿದ್ರೇನೆ ತಕ್ಷಣ ನೆನಪಾಗೋದೆ ಪ್ಯಾಕು ಪ್ಯಾಕು ಹಿತೇಶ್ ಕಾಪಿನಡ್ಕ ಅವರ ನಟನೆ. ಹೌದು ಝೀ ಕನ್ನಡ ಕಾಮಿಡಿ ಕಿಲಾಡಿ ಮೂಲಕ ಜನ ಮನೆ ಸೆಳೆದ ಹಿತೇಶ್ ಎರಡನೇ ರನ್ನರ್ ಅಪ್ ಆಗಿ ಈಗ ಕರ್ನಾಟಕಕ್ಕೆ ಚಿರಪರಿಚತ ವ್ಯಕ್ತಿ.
ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ಲೇಡಿ ಗೆಟಪ್ ಹಾಕಿ ನುಲಿಯುತ್ತಾ ನಮ್ಮನ್ನೆಲ್ಲಾ ತಮ್ಮ ಹಾಸ್ಯ ಮೂಲಕನೇ ನಗೆಗಡಲಲ್ಲಿ ತೇಲಿಸುತ್ತಿದ್ದ ಹಿತೇಶ್ ಮೂಲತಃ ಬೆಳ್ತಂಗಡಿ ತಾಲೂಕಿನ ಕಾಪಿನಡ್ಕದವರು. ತಂದೆ ಮುತ್ತಪ್ಪ ಪೂಜಾರಿ ತಾಯಿ ರಾತ್ನಾವತಿ ಹಾಗೂ ಇವರಿಗೆ ನಿತೇಶ್ ಹಾಗೂ ಸುಖೇಶ್ ಎಂಬ ಇಬ್ಬರು ಅಣ್ಣಂದಿರು. 2 ವರ್ಷಗಳ ಹಿಂದೆಯಷ್ಟೇ ಸ್ವಾತಿ ಎಂಬವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಹಿತೇಶ್ ಅವರದು ಸುಖೀ ಸಂಸಾರ.
ಬಿಕಾಂ ಮಾಡಿರುವ ಹಿತೇಶ್ ಮೊದಲಿಗೆ ಎಲ್ಲೂ ಕೆಲಸ ಸಿಗದೆ ಟಿವಿ ಶಾಪ್ ಹಾಗೂ ರಿಚಾರ್ಜ್ ಶಾಪ್‍ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕೆಲಸ ಮಾಡುತ್ತಿದ್ದಾಗಲೇ ಕೆಲವೊಂದಿಷ್ಟು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಾ ಸಿಕ್ಕ ಅವಕಾಶಗಳನ್ನೆಲ್ಲಾ ಸದುಪಯೋಗಪಡಿಸಿಕೊಳ್ಳುತ್ತಿದ್ದರು. ಮೊದಲ ಬಾರಿಗೆ ಮಂಗಳೂರು ಆಕಾಶವಾಣಿಯಲ್ಲಿ ಹಿತೇಶ್ ಪ್ರಾಣಿ ಪಕ್ಷಿಗಳ ಶಬ್ಧವನ್ನು ಮಿಮಿಕ್ರಿ ಮಾಡುತ್ತಾರೆ. ಬಳಿಕ ಕಾಮಿಡಿ ಕಿಲಾಡಿಗಳು ಶೋನಲ್ಲೂ ಇದೇ ಮಿಮಿಕ್ರಿ ಮಾಡಿ ನಂತರ ಪ್ಯಾಕು ಪ್ಯಾಕು ಹಿತೇಶ್ ಅಂತಾನೇ ಖ್ಯಾತಿ ಪಡೆದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಸಾಕಷ್ಟು ಸಿನಿಮಾ ಆಫರ್ಸ್‍ಗಳು ಇವರನ್ನು ಹರಸಿ ಬರಲು ಶುರುವಾಗಿ ಸ್ಯಾಂಡಲ್ ವುಡ್‍ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಯಜಮಾನ ಸಿನಿಮಾದಲ್ಲಿ ಕಾಣಿಸಿಕೊಂಡು ಕ್ಲಿಕ್ ಆಗುತ್ತಾರೆ.
ತದನಂತರ ಜಂತರ್ ಮಂಥರ್, ಭೂತಕಾಲದ ದರ್ಬಾರ್, ಲೌಡ್ ಸ್ಪೀಕರ್, ಕಿರಾತಕ 2, ಸಕಲಕಲಾ ವಲ್ಲಭ, ಸಮಯದ ಗೊಂಬೆ, ಮೈ ನೇಮ್ ಈಸ್ ಅಣ್ಣಪ್ಪ, ಅಪ್ಪೆ ಟೀಚರ್, ಗೀತಾ, ಏಕಲವ್ಯ, ಮುಗಿಲುಪೇಟೆ, ಸೀತಾಯಣ, ಕ್ರಾಂತಿ, ಸೂಪರ್ ಸ್ಟಾರ್, ಗಜರಾಮ, ಸೂರ್ಯ, ನಾ ಕೋಳಿಕೆ ರಂಗ, ವಿಕ್ಟೋರಿಯ ಮ್ಯಾನ್ಸನ್, ಒನ್ ಆಂಡ್ ಹಾಫ್, ಮಾನ್ಸ್ಟರ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಕಸರತ್ತ್, ಗಿಲ್ ಬಿಸ್ಟಿಕ್ ಫ್ಯಾಮಿಲಿ ಎಂಬ ವೆಬ್ ಸಿರೀಸ್‍ಗಳಲ್ಲಿ ಹಾಗೂ ಯುಟು ಮತ್ತು ಆಧ್ಯ ಎಂಬ ಕಿರುಚಿತ್ರಗಳಲ್ಲಿ ಅಭಿನಯಿಸಿ ತನ್ನ ಅಭಿನಯದ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನು ಝೀ ಕನ್ನಡದ ಕಾಮಿಡಿ ಕಿಲಾಡಿಗಳ ಸೇರಿದಂತೆ ಕಿಲಾಡಿ ಕುಟುಂಬ, ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಸೀಸನ್ 1 ಹಾಗೂ 2, ಡಿಕೆಡಿ, ಸ್ಟಾರ್ ಸುವರ್ಣದ ಕಾಮಿಡಿ ಗ್ಯಾಂಗ್, ಜಾಕ್ ಪಾಟ್, ಹೂ ಅಂತೀಯಾ ಉಹೂ ಅಂತೀಯಾ, ಸುವರ್ಣ ಸೆಲೆಬ್ರೆಟಿ ಲೀಗ್ ರಿಯಾಲಿಟಿ ಶೋ, ಉದಯ ಟಿವಿಯ ಕಾಲ್ ಸೆಂಟರ್ ಕಮಲಿ, ಟ್ರೆಂಡಿಂಗ್ ಸೂಪರ್ ಸ್ಟಾರ್ ಶೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಸಿರಿಕನ್ನಡ ವಾಹಿನಿಯ ಸಖತ್ ಜೋಡಿ ಹಾಗೂ ನಮ್ಮನೆ ಗ್ರಹಲಕ್ಷ್ಮೀ ಶೋನಲ್ಲಿ ಆಂಕರ್ ಆಗಿಯೂ ಕಾಣಿಸಿಕೊಂಡಿದ್ದಾರೆ.
ಇನ್ನು ಝೀ ಕನ್ನಡದ ಪಾರು ಧಾರವಾಹಿ, ಸುವರ್ಣದ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಕಲರ್ಸ್ ಕನ್ನಡದ ಭಾರ್ಗವಿ ಎಲ್‍ಎಲ್‍ಬಿ ಯಲ್ಲೂ ನಟಿಸಿದ್ದಾರೆ. ಸದ್ಯ ತುಳು ರಂಗಭೂಮಿಯ ತುಡರ್ ಕಲಾ ತಂಡ ಕಲ್ಲಡ್ಕ ಟೀಂನ ಗಾಳಿಪಟ ನಾಟಕದಲ್ಲಿ ಅಭಿನಯಿಸುತ್ತಿದ್ದು ಈ ನಾಟಕ ಕೂಡಾ ಸಾಕಷ್ಟು ಸ್ಥಳಗಳಲ್ಲಿ ಪ್ರದರ್ಶನ ಕಂಡಿದೆ.
ಅದೇನೆ ಆಗಲಿ ನಟನೆ, ನಿರೂಪಣೆ, ಹೀಗೆ ಎಲ್ಲದಕ್ಕೂ ಸೈ ಅನ್ನೋ ಹಿತೇಶ್ ಅವರಿಗೆ ಇನ್ನಷ್ಟು ಅವಕಾಶಗಳು ಒಲಿದು ಬರಲಿ, ಕಲಾ ಮಾತೆ ಶಾರದೆಯ ಆಶೀರ್ವಾದ ಇವರಿಗೆ ಸದಾ ಇರಲಿ, ಇವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆದು ಎಲ್ಲೆಡೆ ಪಸರಿಸಲಿ ಎನ್ನೋದೇ ನಮ್ಮ ಆಶಯ.