
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧದ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್ ವರದಿ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾ. 24ಕ್ಕೆ ವಿಚಾರಣೆ ಮುಂದೂಡಿದೆ.
ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್‌ನಲ್ಲಿ ಕೆಲವೊಂದು ಗೊಂದಲಗಳಿವೆ. ಲೋಕಾ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಆರೋಪಿ 1ರಿಂದ 4ರವರೆಗಿನ ಅರೋಪಿಗಳ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಉಲ್ಲೇಖೀಸಿದ್ದಾರೆ. ಅದೇ ವೇಳೆ ಕಾಲಂ 17ರಲ್ಲಿ ತನಿಖೆ ಮುಂದುವರಿಕೆಗೆ ಅನುಮತಿ ಕೋರಿದ್ದು, ಜತೆಗೆ 50-50ರ ಅನುಪಾತದಲ್ಲಿ 2ನೇ ಆರೋಪಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಈ ಹಿಂದಿನ ಮುಡಾ ಆಯುಕ್ತರಾದ ನಟೇಶ್ ಮತ್ತು ಇತರೆ ಸಿಬಂದಿ ಪರಿಹಾರವಾಗಿ ನೀಡಿದ್ದ 14 ನಿವೇಶನಗಳಿಂದ ಮುಡಾಕ್ಕೆ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಹೀಗಾಗಿ ಯಾವ ಅಂಶದ ಬಗ್ಗೆ ತನಿಖೆ ನಡೆಯಬೇಕು ಎಂದು ಸ್ಪಷ್ಟವಾಗಿ ಹೇಳಿಲ್ಲ ಎಂದು ದೂರುದಾರರ ಪರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು. ಅದನ್ನು ಗಮನಿಸಿದ ಕೋರ್ಟ್ ಸರಕಾರಿ ವಿಶೇಷ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಅವರಿಗೆ, ಈ ಕುರಿತು ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು. ಬಳಿಕ ಪ್ರಕರಣದ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿದರು.