ಬೆಳ್ತಂಗಡಿ ಘಟಕಕ್ಕೆ ಬೇಕು ಹೊಸ ವಾಹನ, ಧರ್ಮಸ್ಥಳಕ್ಕೇ ಪ್ರತ್ಯೇಕ ಘಟಕ-ಕಹಳೆ ನ್ಯೂಸ್

ಬೆಳ್ತಂಗಡಿ: ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನಲ್ಲಿ ಅಗ್ನಿ ಅವಘಡಗಳಿಗೆ ಲೆಕ್ಕವಿಲ್ಲ. ಆದರೂ ತಾಲೂಕಿನಲ್ಲಿ ಏಕಮಾತ್ರ ಅಗ್ನಿಶಾಮಕ ಘಟಕವಿದ್ದು, ಅದರಲ್ಲೂ ವಾಹನದ ಆಯಸ್ಸು ಮೀರಿದ ಕಾರಣ ರಸ್ತೆಗಿಳಿಯುತ್ತಿಲ್ಲ. ಈ ಮಧ್ಯೆ ಬಹುತೇಕ ವರ್ಷವಿಡೀ ಭಕ್ತರ ದಟ್ಟಣೆ ಹೊಂದಿರುವ ಧರ್ಮಸ್ಥಳದಲ್ಲಿ ಸುಸಜ್ಜಿತ ಅಗ್ನಿಶಾಮಕ ಘಟಕ ನಿರ್ಮಾಣವಾಗಬೇಕಿದೆ ಎಂಬ ಬೇಡಿಕೆ ಇದೆ.
ಧರ್ಮಸ್ಥಳ ಗ್ರಾಮದಲ್ಲೇ ಸುಮಾರು 15,000ಕ್ಕೂ ಮಿಕ್ಕಿ ಜನಸಂಖ್ಯೆಯಿದ್ದು, ಪ್ರತಿ ವರ್ಷ 2.50 ಕೋಟಿಗೂ ಮಿಕ್ಕಿ ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ವಿಶೇಷ ದಿನಗಳನ್ನು ಹೊರತುಪಡಿಸಿ, ನಿತ್ಯವೂ ಸುಮಾರು 20 ಸಾವಿರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ವರ್ಷಕ್ಕೆ 15 ಲಕ್ಷ ಮಿಕ್ಕಿ ವಾಹನಗಳು ಸೇರುತ್ತವೆ. ಗಣ್ಯ ಅತಿಥಿಗಳ ಭೇಟಿಯೂ ಇದ್ದೇ ಇರುತ್ತದೆ. ಹೀಗಿರುವಾಗ ಧರ್ಮಸ್ಥಳದಲ್ಲಿ ಅಗ್ನಿಶಾಮಕ ಘಟಕ ಬೇಕೆಂದು ಆಗ್ರಹಿಸಲಾಗುತ್ತಿದೆ.
ಧರ್ಮಸ್ಥಳದಲ್ಲಿ ಹೊಸ ಠಾಣೆಯಾದಲ್ಲಿ ನೆರಿಯ-20 ಕಿ.ಮೀ., ಚಾರ್ಮಾಡಿ-18 ಕಿ.ಮೀ., ದಿಡುಪೆ-26 ಕಿ.ಮೀ. ಶಿಶಿಲಾ-25 ಕಿ.ಮೀ., ಶಿಬಾಜೆ-23, ಮಲವಂತಿಗೆ-25, ಮಿತ್ತಬಾಗಿಲು-22, ರೆಕ್ಯಾ-22 ಸೇರಿದಂತೆ ಸುಮಾರು 15 ಕಿ.ಮೀ. ವ್ಯಾಪ್ತಿಯೊಳಗಿನ ಉಜಿರೆ, ಮುಂಡಾಜೆ, ಕಳಂಜ, ಪುದುವೆಟ್ಟು ತೋಟತ್ತಾಡಿ, ಚಿಬಿದ್ರೆ, ಕೊಕ್ಕಡ, ಹತ್ಯಡ್ಕ, ನಿಡ್ಲೆ, ಕಲ್ಮಂಜ, ಕಡಿರುದ್ಯಾವರ, ಪಟ್ರಮೆ, ಬೆಳಾಲು, ಇಂದಬೆಟ್ಟು, ಕನ್ಯಾಡಿ ಸೇರಿ ಸುಮಾರು 1.50 ಲಕ್ಷ ಮಂದಿ ಇರುವ ವಸತಿ ಪ್ರದೇಶವಿದೆ. ಶಾಲಾ ಕಾಲೇಜು, ಕೈಗಾರಿಕೆ, ವನ್ಯಜೀವಿ ಅರಣ್ಯ ಭಾಗಗಳಿಗೆ ತತ್‌ಕ್ಷಣ ಸ್ಪಂದಿಸಲು ಸಾಧ್ಯ ಎಂಬ ಅಭಿಪ್ರಾಯವಿದೆ.
ಇದರೊಂದಿಗೆ ಇವೆಲ್ಲ ಪ್ರದೇಶಗಳಿಗೆ ಈಗಿರುವ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಿಂದ ತೆರಳಲು ಕನಿಷ್ಠ ಪಕ್ಷ 40 ಕಿ.ಮೀ. ದೂರವಿದೆ. ಅಲ್ಲದೇ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ 15 ವರ್ಷಗಳು ಮೀರಿದ ವಾಹನ ಫಿಟೆ°ಸ್ ಸರ್ಟಿಫಿಕೇಟ್ ಇಲ್ಲದೆ ಮೂಲೆಗುಂಪಾಗಿದೆ. ಅಗ್ನಿ ಅವಘಡ ತುರ್ತು ಸಂದರ್ಭದಲ್ಲಿ ತಾಲೂಕಿನ 81 ಗ್ರಾಮಗಳಿಗೆ ತಾಲೂಕಿನ ಘಟಕದಿಂದ ನೆರವು ಸಿಗುವುದು ಕಷ್ಟ ಎಂಬಂತಾಗಿದೆ. ಈ ಘಟಕದ ಸುಧಾರಣೆಯನ್ನು ನಿರೀಕ್ಷಿಸಿದ್ದು, ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ಕೂಡಲೇ ಭರ್ತಿ ಮಾಡಬೇಕಿದೆ.
ಧರ್ಮಸ್ಥಳದಲ್ಲಿ ಘಟಕ ಬಂದರೆ ಸುತ್ತಮುತ್ತಲ ಧಾರ್ಮಿಕ ಸ್ಥಳಗಳಾದ ಸೌತಡ್ಕ, ಕನ್ಯಾಡಿ ರಾಮಕ್ಷೇತ್ರ, ಸುರ್ಯ ಸದಾಶಿವರುದ್ರ ದೇವಸ್ಥಾನ, ಕಾಜೂರು ದರ್ಗಾ ಉರೂಸ್ ಜನಸಾಂದ್ರತೆ ಸಮಯದಲ್ಲಿ ತುರ್ತು ಸ್ಪಂದನೆಗೆ ಲಭ್ಯವಾಗಲಿದೆ. ಮಂಗಳೂರು- ಬೆಂಗಳೂರು ಪೆಟ್ರೋಲ್, ಡೀಸೆಲ್ ಪೈಪ್‌ಲೈನ್, ಎಲ್.ಪಿ.ಜಿ. ಗ್ಯಾಸ್ ಪೈಪ್‌ಲೈನ್, ಎಂ.ಆರ್.ಪಿ.ಎಲ್. ಪಂಪ್‌ಹೌಸ್, ರಾಜ್ಯದೆಲ್ಲೆಡೆ ಬಸ್ ಸಂಚರಿಸುವ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ. ಘಟಕ, ಶಾಲಾ ಕಾಲೇಜು, 6 ಪ್ರಾಥಮಿಕ ಆರೋಗ್ಯ ಕೇಂದ್ರ, ದಟ್ಟ ಅರಣ್ಯ ಭಾಗದ ಸಂರಕ್ಷಣೆ ಸವಾಲಾಗಿದ್ದು, ಸುಸಜ್ಜಿತ ಘಟಕದ ಅಗತ್ಯವಿದೆ. ಈ ಸಂಬಂಧ ಪ್ರತ್ಯೇಕ ಘಟಕ ಸ್ಥಾಪನೆಗೆ 2019 ರಿಂದಲೂ ಮನವಿಯನ್ನು ಸಲ್ಲಿಸಲಾಗುತ್ತಿದ್ದರೂ, ಇನ್ನೂ ಈಡೇರಿಲ್ಲ.
ಬೆಂಕಿ ಪ್ರಕರಣಗಳು ಅಧಿಕ
ಬೇರೆ ತಾಲೂಕುಗಳಿಗೆ ಹೋಲಿಸಿದರೆ ಬೆಳ್ತಂಗಡಿ ತಾಲೂಕು ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ. ಇಲ್ಲಿ ಅರಣ್ಯ ವಲಯವಲ್ಲದೆ ವನ್ಯಜೀವಿ ವಿಭಾಗವೂ ಇದೆ. ಸಾಕಷ್ಟು ಕೃಷಿ ಭೂಮಿ ಇದೆ. ಹೆಚ್ಚಿನ ವಿದ್ಯುತ್‌ಲೈನ್ ಅರಣ್ಯದ ಮೂಲಕವೇ ಹಾದುಹೋಗಿದೆ. ಹಾಗಾಗಿ ಅರಣ್ಯದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಆರಿಸುವುದೇ ದೊಡ್ಡ ಸವಾಲಾಗಿದೆ.
ರಾಜ್ಯದ ಬಹುತೇಕ ಅಗ್ನಿಶಾಮಕ ಘಟಕಕ್ಕೆ ನೂತನ ವಾಹನದ ಬಗ್ಗೆ ಈಗಾಗಲೇ ಪ್ರಸ್ತಾವನೆಯಿದ್ದು, ಶೀಘ್ರವೇ ಹೊಸ ವಾಹನಗಳು ಬರಲಿವೆ. ಧರ್ಮಸ್ಥಳ ಘಟಕದ ಪ್ರಸ್ತಾವನೆ ಇದ್ದು, ಸುರ್ಯ ಬಳಿ 2 ಎಕ್ರೆ ಸ್ಥಳ ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಈ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ಶಿವಶಂಕರ್, ನಿರ್ದೇಶಕರು, ಬೆಂಗಳೂರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು.
ಅಗ್ನಿಶಾಮಕ ವಾಹನಗಳನ್ನು ಬೇಡಿಕೆಗೆ ತಕ್ಕಂತೆ ಆದೇಶ ಮಾಡಿ ಕಂಪೆನಿಗಳಿಂದ ರೂಪಿಸಬೇಕು. ಇದು ಬೃಹತ್ ಪ್ರಕ್ರಿಯೆ. ಒಮ್ಮೆಗೆ ಖರೀದಿಸಲಾಗದು. ರಾಜ್ಯದಲ್ಲಿ 100 ವಾಹನಗಳ ಬೇಡಿಕೆ ಇದ್ದು, ತುರ್ತು ಒದಗಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ.