ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿ ಹವ್ಯಾಸಿ ಕಲಾವಿದೆ..!! ಸಾಧನೆಯ ಹಾದಿಯಲ್ಲಿ ವಿನುತ ನಿತೇಶ್ ಪೂಜಾರಿ..!! – ಕಹಳೆ ನ್ಯೂಸ್

ಯಕ್ಷಗಾನ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಕಲೆ ಕೂಡಾ ಹೌದು. ಅಂತಹ ಪ್ರಸಿದ್ಧ ಕಲೆಗಳಲ್ಲಿ ಅದೆಷ್ಟೋ ಮಂದಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಸಾಧನೆ ಮೆರೆದಿದ್ದಾರೆ. ಅಂತವರಲ್ಲಿ ಕೈರಂಗಳ ವಿನುತಾ ನಿತೇಶ್ ಪೂಜಾರಿ ಕೂಡಾ ಒಬ್ಬರು.
ವಿನುತ ನಿತೇಶ್ ಪೂಜಾರಿ. ದಿ. ಶಿವರಾಮ ಗಟ್ಟಿ ಹಾಗೂ ಜಯಲಕ್ಷ್ಮೀದಂಪತಿಯ ಪುತ್ರಿ. ಎಂಎಸ್‍ಸಿ ಹಾಗೂ ಬಿಇಡಿ ಮುಗಿಸಿರುವ ವಿನುತಾ ಸದ್ಯ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‍ನಲ್ಲಿ ಬಯಾಲಜಿ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದಾರೆ. ಮೆಹಂದಿ ಡಿಸೈನಿಂಗ್, ಬುಕ್ ರೀಡಿಂಗ್ ಇತ್ಯಾದಿ ಇವರ ಹವ್ಯಾಸಗಳು.
ಸಣ್ಣ ವಯಸ್ಸಿನಲ್ಲೇ ಯಕ್ಷಗಾನ ಕಲಾವಿದೆಯಾಗಬೇಕೆಂಬ ಆಸಕ್ತಿ ಹೊಂದಿದ್ದ ವಿನುತ ಅವರು ತಮ್ಮ ಊರಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ನೋಡಲು ತಪ್ಪದೇ ಹಾಜರಾಗುತ್ತಿದ್ದರು. ಹೀಗೆ ನೋಡ್ತಾ ನೋಡ್ತಾ ತಾನೂ ಯಕ್ಷಗಾನ ಕಲಿಬೇಕೆಂಬ ಆಸಕ್ತಿ ಹುಟ್ಟಿಕೊಂಡಿತು. 6ನೇ ತರಗತಿಯಲ್ಲಿರುವಾಗ ವಿನುತಾ ಓದುತ್ತಿದ್ದ ಶಾಲೆಯಲ್ಲಿ ಶ್ರೀ ಕೃಷ್ಣ ಮೂಲ್ಯ, ನಾಗೇಶ್ ಆಚಾರ್ಯ ಹಾಗೂ ಕೈರಂಗಳ ಗೋಪಾಲ ಕೃಷ್ಣ ಯಕ್ಷಗಾನ ಸಂಘದ ಹಲವು ಸದಸ್ಯರು ಯಕ್ಷಗಾನ ನಾಟ್ಯ ತರಗತಿ ಆರಂಭಿಸಿದ್ದರು. ಹಾಗಾಗಿ 2006ರಿಂದ ಯಕ್ಷಗಾನ ಪಯಣ ಶುರುವಾಗಿದೆ. ಕಟೀಲು ಮೇಳದ ಕಲಾವಿದರಾದ ಕೈರಂಗಳ ಕೃಷ್ಣ ಮೂಲ್ಯ ವಿನುತಾ ಅವರ ಯಕ್ಷಗಾನ ಗುರುಗಳು.
ತರಣಿ ಸೇನ ಕಾಳಗ, ಕೃಷ್ಣ ಲೀಲೆ, ನರಕಾಸುರ ಮೋಕ್ಷ, ಮಾನಿμÁದ, ಜಾಂಬವತಿ ಕಲ್ಯಾಣ, ಸುದರ್ಶನ ವಿಜಯ, ಮಾತಂಗ ಕನ್ಯೆ, ಬಪ್ಪನಾಡು ಕ್ಷೇತ್ರ ಮಹಾತ್ಮೆ ವಿನುತಾ ಅವರ ನೆಚ್ಚಿನ ಪ್ರಸಂಗಗಳು. ಶಬರಿ, ಸುದರ್ಶನ, ಮದಿರಾಕ್ಷ, ಕೃಷ್ಣ, ತರಣಿಸೇನ, ವಿಷ್ಣು, ಮಾಲಿನಿ ಇವು ವಿನುತಾ ಅವರ ನೆಚ್ಚಿನ ವೇಷಗಳು. ಕೈರಂಗಳ ಗೋಪಾಲ ಕೃಷ್ಣ ಯಕ್ಷಗಾನ ಸಂಘದ ಸದಸ್ಯೆಯಾಗಿ ಹಲವಾರು ಕಡೆ ವೇಷ ಹಾಕಿದ್ದಾರೆ. ಹಾಗೆಯೇ ಮಂಗಳೂರು ವಿಶ್ವವಿದ್ಯಾಲಯದ ಶ್ರೀ ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಗಾನ ತಂಡದಲ್ಲಿ ಹಲವಾರು ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಸಂಪಾಜೆ ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಪರ್ಧೆಯಲ್ಲಿ ಪುಂಡು ವೇಷಕ್ಕೆ ತೃತೀಯ ಬಹುಮಾನ ಸಿಕ್ಕಿರುವುದು ಇವರ ಜೀವನದಲ್ಲಿ ಸಿಕ್ಕ ಒಂದು ದೊಡ್ಡ ಪ್ರಶಸ್ತಿ. ಸದ್ಯ ಉಡುಪಿಯಲ್ಲಿ ಬಡಗುತಿಟ್ಟಿನಲ್ಲೂ ಹೆಜ್ಜೆ ಕಲಿತು ವೇಷ ಹಾಕಲು ಶುರುಮಾಡಿದ್ದಾರೆ. ಇವರಿಗೆ ಇನ್ನಷ್ಟು ದೊಡ್ಡ ದೊಡ್ಡ ವೇದಿಕೆಗಳ ಅವಕಾಶ ಸಿಕ್ಕು ಯಕ್ಷಲೋಕದಲ್ಲಿ ದೊಡ್ಡ ಮಟ್ಟಿನ ಸಾಧನೆ ಮಾಡಿ ಎಲ್ಲರೂ ಗುರತಿಸುವಂತಹ ವ್ಯಕ್ತಿಯಾಗಲಿ ಎಂಬುವುದು ನಮ್ಮ ಹಾರೈಕೆ.