
ಉಡುಪಿ: ‘ಮೀನು ಕದ್ದಿದ್ದೇನೆ ಎಂದು ಆರೋಪಿಸಿ ನನಗೆ ಹೊಡೆದಿದ್ದಾರೆ. ಆ ನಂತರ ನಾನು ಬಂದರಿಗೆ ಹೋಗಿಲ್ಲ. ನಾವು ನಮ್ಮ ಊರಿಗೆ ವಾಪಸ್ ಹೋಗುತ್ತೇವೆ’ ಎಂದು ಮಲ್ಪೆಯಲ್ಲಿ ಹಲ್ಲೆಗೊಳಗಾಗಿದ್ದ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಮಹಿಳೆ ಹೇಳಿದರು.
ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಆರೇಳು ವರ್ಷದಿಂದ ಮಲ್ಪೆಯಲ್ಲಿ ಕೆಲಸ ಮಾಡುತ್ತಿದ್ದೇನೆ.
ನನ್ನ ಮೇಲೆ ಹಲ್ಲೆ ಮಾಡಿದವರನ್ನು ಬಂದರಿನಲ್ಲಿ ನೋಡಿದ ಪರಿಚಯವಿದೆ’ ಎಂದರು.
‘ಹಲ್ಲೆ ನಡೆಸಿದವರ ಮೇಲೆ ನನಗೆ ದ್ವೇಷವಿಲ್ಲ. ಅವರಿಗೆ ಏನೂ ಮಾಡುವುದು ಬೇಡ. ಘಟನೆ ನಡೆದ ಬಳಿಕ ನನಗೆ ಯಾರೂ ತೊಂದರೆ ನೀಡಿಲ್ಲ. ನಮ್ಮ ಪಾಡಿಗೆ ನಾವು ದುಡಿದು ತಿನ್ನುತ್ತೇವೆ’ ಎಂದರು.
‘ಕೃತ್ಯ ನಡೆದ ದಿನ ರಾತ್ರಿ ರಾಜಿ ಪಂಚಾಯಿತಿ ಮಾಡಿಕೊಂಡು ಬಂದಿದ್ದೆವು. ಮರುದಿನ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅದಕ್ಕೆ ನಾನು ಪೊಲೀಸ್ ಠಾಣೆಗೆ ಹೋಗಿ ಸಹಿ ಮಾಡಿ ಬಂದಿದ್ದೇನೆ’ ಎಂದೂ ವಿವರಿಸಿದರು.
‘ನಾನು ಸ್ವಲ್ಪ ಮೀನು ತೆಗೆದಿದ್ದು ಹೌದು, ಬಂದರಿನಲ್ಲಿ ಈ ರೀತಿ ಮೀನು ತೆಗೆಯುವುದು ಸಾಮಾನ್ಯ. ಆದರೆ ಅವತ್ತು ನನ್ನ ಗ್ರಹಚಾರ ಸರಿ ಇರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪ: ಮರಕ್ಕೆ ಕಟ್ಟಿ ಹಾಕಿ ಮಹಿಳೆಗೆ ಹಲ್ಲೆ
ಅಪಪ್ರಚಾರ ವಿರೋಧಿಸಿ ಪ್ರತಿಭಟನೆ:
‘ಮಹಿಳೆ ಮೇಲೆ ಹಲ್ಲೆ ನಡೆದಿರುವುದನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ. ಮಲ್ಪೆಯಲ್ಲಿ ನಾವೆಲ್ಲ ಸೌಹಾರ್ದದಿಂದ ಬದುಕುತ್ತಿದ್ದೇವೆ. ಕೋವಿಡ್ ಕಾಲದಲ್ಲಿ ಹೊರಗಿನ ಕಾರ್ಮಿಕರಿಗೆ ನಾವು ಸಾಕಷ್ಟು ಸಹಾಯ ಮಾಡಿದ್ದೇವೆ. ಮೊನ್ನೆಯ ಕೃತ್ಯವನ್ನು ಇಟ್ಟುಕೊಂಡು ಅಪಪ್ರಚಾರ ಮಾಡಲಾಗುತ್ತಿದೆ ಮತ್ತು ಅಮಾ
ಯಕರನ್ನು ಬಂಧಿಸಿರುವುದನ್ನು ಖಂಡಿಸಿ ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮಲ್ಪೆಯಲ್ಲಿ ಮೀನುಗಾರಿಕಾ ಚಟುವಟಿಕೆ ಸ್ಥಗಿತಗೊಳಿಸಿ ಪ್ರತಿಭಟಿಸಲಿದ್ದೇವೆ’ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ತಿಳಿಸಿದ್ದಾರೆ.
ಸಂತ್ರಸ್ತೆ ಹೇಳಿಕೆ ದಾಖಲು:
ಸಂತ್ರಸ್ತ ಮಹಿಳೆಯು ನ್ಯಾಯಾಧೀಶರ ಮುಂದೆ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಸಾಕ್ಷ್ಯ ಅಧಿನಿಯಮ ಕಲಂ 164ರ ಅಡಿಯಲ್ಲಿ ದೂರುದಾರೆ ಹೇಳಿಕೆ ನೀಡಿದ್ದು, ನ್ಯಾಯಾಧೀಶರು ಅದನ್ನು ದಾಖಲಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಇದುವರೆಗೆ ಐವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ | ಮರಕ್ಕೆ ಕಟ್ಟಿ ಮಹಿಳೆಗೆ ಥಳಿತ: ಮತ್ತಿಬ್ಬರ ಬಂಧನ
‘ಎರಡೂವರೆ ದಶಕಗಳ ಹಿಂದುತ್ವ ರಾಜಕೀಯ, ಕರಾವಳಿಯ ಸಮಾಜದಲ್ಲಿ ಯಾವ ರೀತಿಯ ನಡವಳಿಕೆಗಳನ್ನು ಜನರಲ್ಲಿ ಉಂಟು ಮಾಡಿದೆಯೋ ಅದರ ಮತ್ತೊಂದು ಅವತರಣಿಕೆ ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಪ್ರಕರಣ’ ಎಂದು ‘ಸಹಬಾಳ್ವೆ ಉಡುಪಿ’ ಜಿಲ್ಲಾ ಸಂಚಾಲಕ ಕೆ. ಫಣಿರಾಜ್ ಹೇಳಿದ್ದಾರೆ. ‘ಈ ರೀತಿಯ ಕೃತ್ಯ ಎಸಗುವುದು, ಅದರ ಬಗ್ಗೆ ನಾಚಿಕೆ ಇಲ್ಲದೆ ಹೇಳಿಕೆ ಕೊಡುವುದು ಇಲ್ಲಿ ಸಾಮಾನ್ಯವಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಇಲ್ಲಿ ಪೆಟ್ಟು ಕೊಟ್ಟವರೂ, ಪೆಟ್ಟು ತಿಂದವರೂ ದುರ್ಬಲರೆ. ಇಂತಹ ಕೃತ್ಯ ಎಸಗಿ ಅನಂತರ ರಾಜಿ ಪಂಚಾಯಿತಿ ಮಾಡಿಕೊಳ್ಳುತ್ತೇವೆ ಎನ್ನುವುದು ಇಡೀ ಸಂವಿಧಾನ, ಪ್ರಜಾಪ್ರಭುತ್ವವನ್ನು ಪ್ರಶ್ನಿಸಿದಂತೆ’ ಎಂದು ಹೇಳಿದ್ದಾರೆ.’ಇಂತಹ ಕೃತ್ಯ ಸಾಮಾನ್ಯ ಎಂಬಂತಾಗಿದೆ’