ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ-ಕಹಳೆ ನ್ಯೂಸ್

ಬೆಂಗಳೂರು: ‘ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ. ಇದರಿಂದ ವಿದ್ಯಾರ್ಥಿಗಳ ನೈಜ ಸಾಮರ್ಥ್ಯ ಗೊತ್ತಾಗುತ್ತದೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಶುಭಕೋರಿ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಂಡಿಸಿದ ಗೊತ್ತುವಳಿ ಮೇಲೆ ಅವರು ಮಾತನಾಡಿದರು.
‘ಕೋವಿಡ್ ಸಂದರ್ಭದಲ್ಲಿ ಕೃಪಾಂಕ ನೀಡುವ ಪರಿಪಾಟ ಆರಂಭಿಸಲಾಯಿತು. ಈ ವರ್ಷದಿಂದ ಅದನ್ನು ಸಂಪೂರ್ಣ ತೆಗೆದುಹಾಕಿದ್ದೇವೆ’ ಎಂದು ಹೇಳಿದರು.
‘ಈ ಬಾರಿ ಕೆಲವರು ಆನ್‌ಲೈನ್ ಮೂಲಕ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಹಾಕಿ ವಿದ್ಯಾರ್ಥಿಗಳಿಂದ ಹಣ ವಸೂಲಿಗೆ ಇಳಿದಿದ್ದಾರೆ. ಇಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ತಗೆದುಕೊಳ್ಳಬೇಕು’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದರು.
ಇಂತಹ ಪ್ರಕರಣಗಳನ್ನು ಇಲಾಖೆ ವತಿಯಿಂದ ಪತ್ತೆ ಮಾಡಿಸಿ ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಭರವಸೆ ನೀಡಿದರು.