ಹಾವ, ಭಾವ, ನಟನೆ ಮೂಲಕ ಮನೆ ಮಾತಾದ ಬೆಳ್ಳಿಪ್ಪಾಡಿ ಮನೆತನದ ಕುವರಿ ವೆನ್ಯಾ ರೈ – ಕಹಳೆ ನ್ಯೂಸ್

ಕಲೆ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ. ಒಂದು ವೇಳೆ ಕಲೆ ಒಲಿದರೆ ಅವರಷ್ಟು ಅದೃಷ್ಟಶಾಲಿ ಬೇರೆ ಯಾರೂ ಇಲ್ಲ. ಹೌದು ಕಲೆ ಅನ್ನೋದೇ ಹಾಗೆ ಒಂದು ಬಾರಿ ಕಲಾ ಮಾತೆ ಶಾರದೆ ಕೈ ಹಿಡಿದರೆ ಅವರ ಅದೃಷ್ಟವೇ ಖುಲಾಯಿಸಿದಂತೆ. ಅಂತಹ ಒಬ್ಬ ಕಲಾವಿದೆ ನಮ್ಮ ನಡುವೆಯೇ ಇದ್ದು ಸದ್ದಿಲ್ಲದೇ ಸುದ್ದಿಯಾಗುತ್ತಿದ್ದಾರೆ. ಅವರೇ ತುಳುನಾಡಿನ ಅನಂತಾಡಿಯ ಬೆಳ್ಳಿಪ್ಪಾಡಿ ಮನೆತನದ ವೆನ್ಯಾ ರೈ.
ಮುದ್ದು ಮುಖದ ಚಂದುಳ್ಳಿ ಚೆಲುವೆ ವೆನ್ಯಾ ತನ್ನ ಹಾವ ಭಾವ, ನಟನೆ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾದ ಬೆಳ್ಳಿಪ್ಪಾಡಿ ಮನೆತನದ ಕುವರಿ. ವೆನ್ಯಾ ಅವರು ಖ್ಯಾತ ತುಳು ರಂಗಭೂಮಿ, ಕನ್ನಡ ಹಾಗೂ ತುಳು ಸಿನಿಮಾ ಮತ್ತು ಸೀರಿಯಲ್ ನಟ ಕಲಾಸಾಮ್ರಾಟ್ ಚೇತನ್ ರೈ ಮಾಣಿ ಹಾಗೂ ರಶ್ಮಿ ಸಿ ರೈ ದಂಪತಿಯ ಪುತ್ರಿ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ತೃತೀಯ ವರ್ಷದ ಬಿಕಾಂ ಓದುತ್ತಿದ್ದು, ಇವರ ಮೊದಲ ಸಿನಿಮಾ ಭಾವಪೂರ್ಣ. ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಚೇತನ್ ಮುಂಡಾಡಿ ಅವರ ನಿರ್ದೇಶನದ ಮೊದಲ ಸಿನಿಮಾದಲ್ಲೇ ಹಿರೋಯಿನ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವೆನ್ಯಾಳ ಎರಡನೇ ಸಿನಿಮಾ ಆರಾಟ.. ಅಂತಾರಾಷ್ಟ್ರೀಯ ಚಲನಚಿತ್ರ ಸ್ಪರ್ಧೆಗೆ ಆಯ್ಕೆಯಾದ ಮಲಾರ್ ಬೀಡು ಪುಷ್ಪರಾಜ್ ರೈ ನಿರ್ದೇಶನದ ಆರಾಟ ಸಿನಿಮಾದಲ್ಲೂ ನಟಿಸಿದ್ದು, ತನ್ನ ಅತ್ಯದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಇವರ ಮೂರನೇ ಚಿತ್ರ ಹಯವದನ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನ ಅರಮನೆ ಸಿನಿಮಾ. ಈ ಚಿತ್ರ ಕೂಡಾ ಥಿಯೇಟರ್‍ಗಳಲ್ಲಿ ಯಶಸ್ವೀಯಾಗಿ ಓಡುತ್ತಿದ್ದು, ಮೂವತ್ತು ದಿನ ದಾಟಿದೆ. ಇವರ ಹಾವ ಭಾವ ನಟನೆ ಎಲ್ಲರನ್ನೂ ಆಕರ್ಷಿಸುತ್ತಿದ್ದು ಇವರ ಪ್ರತಿಭೆಗೆ ಸಾಕಷ್ಟು ವೇದಿಕೆಯಲ್ಲಿ ಸನ್ಮಾನ ಪುರಸ್ಕಾರಗಳು ಕೂಡಾ ದೊರೆತಿದೆ.
ತಂದೆಯೇ ಮೊದಲ ಗುರು ಎಂದು ಹೇಳುವ ವೆನ್ಯಾಗೆ ತಂದೆಯೇ ರೋ ಮಾಡೆಲ್. ವೆನ್ಯಾರ ತಂದೆ ಚೇತನ್ ರೈ ಮಾಣಿ ಕೂಡಾ ಸಾಕಷ್ಟು ರಂಗಭೂಮಿ, ಸಿನಿಮಾ ಹಾಗೂ ಸೀರಿಯಲ್‍ಗಳಲ್ಲಿ ಅಭಿನಯಿಸಿದ್ದು ಸಾಕಷ್ಟು ಪ್ರಶಸ್ತಿ ಗೌರವಗಳು ಸಿಕ್ಕಿವೆ. ಅಷ್ಟೇ ಅಲ್ಲ ವೆನ್ಯಾಳ ತಂಗಿ ಮಾನ್ಯ ರೈ ಅವರು ಕೂಡಾ ಆರಾಟ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮುಂದೆ ಬರುವ ದಿಗಿಲು ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಒಟ್ಟು ಕುಟುಂಬವೇ ಕಲಾ ಮಾತೆಯ ಸೇವೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ.
ಅದೇನೆ ಆಗ್ಲಿ. ನಟನೆ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ವೆನ್ಯಾ ರೈ ಅವರಿಗೆ ಕಲಾ ಮಾತೆ ಶಾರದೆ ದಯೆಯಿಂದ ಇನ್ನಷ್ಟು ಅವಕಾಶಗಳು ದೊರೆತು ಮುಂದಿನ ದಿನಗಳಲ್ಲಿ ದೊಡ್ಡ ಪ್ರಾಜೆಕ್ಟ್‍ಗಳಲ್ಲಿ ಅಭಿನಯಿಸುವಂತಹ ಅದೃಷ್ಟ ಒಲಿದು ವಿಶ್ವದಾದ್ಯಂತ ತಮ್ಮ ಹೆಸರು ಪಸರಿಸಲಿ ಅನ್ನೋದು ನಮ್ಮ ಹಾರೈಕೆ.