ರಾಜೀನಾಮೆ ಕೊಟ್ಟಿಲ್ಲ ಸಭಾಪತಿ ಬಸವರಾಜ ಹೊರಟ್ಟಿ..!!? ಸ್ವತಃ ಅವರೇ ಕೊಟ್ಟ ಸ್ಪಷ್ಟನೆ ಏನು? – ಕಹಳೆ ನ್ಯೂಸ್

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗತೊಡಗಿದ್ದರ ಬೆನ್ನಲ್ಲೇ ಬಸವರಾಜ್ ಹೊರಟ್ಟಿ ಸ್ವತಃ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ರಾಜೀನಾಮೆ ವಿಷಯ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಹೊರಟ್ಟಿ, ಹನಿಟ್ರ್ಯಾಪ್ ನಂತಹ ಪ್ರಕರಣಗಳು ಸದನದಲ್ಲಿ ಕೇಳಿ ಬರುತ್ತಿವೆ. ಚಿಂತಕರ ಚಾವಡಿ ಎನಿಸಿಕೊಂಡಿರುವ ವಿಧಾನ ಪರಿಷತ್‌ನಲ್ಲಿ ಎಲ್ಲವೂ ಸರಿಯಿಲ್ಲ. ಕಾಲ ಕೆಟ್ಟಿದ್ದು, ರಾಜಕಾರಣ ಬಹಳ ಕಲುಷಿತ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ವಿಧಾನ ಪರಿಷತ್ ನ ಗೌರವ ಕಳೆದು ಹೋಗಿ ಬಹಳ ದಿನ ಆಗಿದೆ. ಇಂತಹ ಸಮಯದಲ್ಲಿ ಸಭಾಪತಿಯಾಗಿ ಮುಂದುವರೆಯುವದೋ ಬೇಡವೋ ಎಂಬ ಗೊಂದಲ ಉಂಟಾಗಿದ್ದು ನಿಜ. ಸದನದ ಸದಸ್ಯರ ವರ್ತನೆಯಿಂದ ಬೇಸತ್ತು ಹೋಗಿದ್ದೇನೆ ಎಂದು ಹೊರಟ್ಟಿ ಹೇಳಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ನಾನು ರಾಜೀನಾಮೆ ನೀಡಬೇಕು ಅಂತ ತೀರ್ಮಾನ ಮಾಡಿದ್ದು ನಿಜ. ನನ್ನ ಕಚೇರಿಯಿಂದ ನಾನು ಸಹಿ ಮಾಡದ ಪತ್ರದ ಫೋಟೋ ವೈರಲ್ ಆಗತೊಡಗಿದೆ. ರಾಜೀನಾಮೆಗೆ ಸಹಿ ಮಾಡಿರುವ ಪತ್ರ ನನ್ನ ಬಳಿಯೇ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಇಲ್ಲಿಯವರೆಗೂ ತಾವು ರಾಜೀನಾಮೆ ಸಲ್ಲಿಸಿಲ್ಲ ಎಂಬುದನ್ನು ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಸದನದಲ್ಲಿ ಮೊನ್ನೆ ನಡೆದ ಘಟನೆ ಮನಸ್ಸಿಗೆ ಬಹಳ ನೋವಾಗಿದೆ. ಕುರ್ಚಿ ಆಸೆಗೆ ಕೂರೋದು ಸರಿಯಲ್ಲ ಅಂತ ನನಗೆ ಅನ್ನಿಸಿದೆ. ನನ್ನ ಆಪ್ತರು ನನಗೆ ರಾಜೀನಾಮೆ ನೀಡಬೇಡಿ ಅಂತ ಒತ್ತಾಯ ಮಾಡ್ತಿದ್ದಾರೆ. ಹೀಗಾಗಿ ನಾನು ಸ್ವಲ್ಪ ವಿಚಾರ ಮಾಡ್ತೇನೆ. ಇನ್ನು ಮೂರ್ನಾಲ್ಕು ದಿನದಲ್ಲಿ ರಾಜೀನಾಮೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಬಸವರಾಜ ಹೊರಟ್ಟಿ ಅವರು ತಿಳಿಸಿದ್ದಾರೆ.