ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿರುವ ಸಕಲಕಲಾ ವಲ್ಲಭೆ “ವಿದುಷಿ ಮೈತ್ರಿ ಭಟ್ ಮವ್ವಾರು” – ಕಹಳೆ ನ್ಯೂಸ್

ಒಂದೇ ಕಲೆಯನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದವರು ಅದೆಷ್ಟೋ ಜನ. ಆದ್ರೆ ಬೇರೆ ಬೇರೆ ಕಲೆಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಎನಿಸಿಕೊಂಡವರು ಕೆಲವೇ ಕೆಲವು ಜನ. ಅಂತವರಲ್ಲಿ ವಿದುಷಿ ಮೈತ್ರಿ ಭಟ್ ಮವ್ವಾರು ಕೂಡಾ ಒಬ್ಬರು.
ಹೌದು..ಎಂಎಸ್‍ಸಿ ಕಂಪ್ಯೂಟರ್ ಸೈನ್ಸ್ ಪದವೀಧರೆಯಾಗಿರುವ ಮೈತ್ರಿ ಭಟ್ ಅವರಿಗೆ ಬಾಲ್ಯದಲ್ಲೇ ಭರತನಾಟ್ಯ, ಯಕ್ಷಗಾನ ಹಾಗೂ ನಾಟಕಗಳಲ್ಲಿ ಅಪಾರವಾದ ಆಸಕ್ತಿ. ಮೈತ್ರಿ ಭಟ್ ಕಾಸರಗೋಡಿನ ಮವ್ವಾರಿನವರಾಗಿದ್ದು, ಗಣಪತಿ ಭಟ್ ಚಂದ್ರಿಕಾ ಭಟ್ ದಂಪತಿಯ ಪುತ್ರಿ. ಸದ್ಯ ಆಳ್ವಾಸ್ ಕಾಲೇಜ್ ಮೂಡಬಿದಿರೆಯಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ತಮ್ಮ ಶಾಲಾ ಹಾಗೂ ಕಾಲೇಜು ದಿನಗಳಲ್ಲೇ ಕಲೋತ್ಸವಗಳಲ್ಲಿ ಭಾಗವಹಿಸಿ, ಭರತನಾಟ್ಯಂ, ಕೂಚುಪುಡಿ, ಮೋಹಿನಿಯಾಟ್ಟಂ ಯಕ್ಷಗಾನದಲ್ಲಿ ರಾಜ್ಯಮಟ್ಟದವರೆಗೂ ಹೋಗಿ ಪ್ರದರ್ಶನವನ್ನ ನೀಡಿ ಬಹುಮಾನಗಳನ್ನ ಪಡೆದವರು. ನಾಟಕಗಳಲ್ಲಿಯೂ ಅಭಿನಯಿಸಿರುವ ಇವರು ಉತ್ತಮ ಅಭಿನೇತ್ರಿ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ. ಬೆಂಗಳೂರು, ಮುಂಬೈ ನಗರಗಳಲ್ಲೂ ನಡೆದ ಯಕ್ಷಗಾನ ಪ್ರದರ್ಶನಗಳಲ್ಲಿ ಬೇರೆಬೇರೆ ಕಡೆಗಳಲ್ಲಿ ವಿಭಿನ್ನವಾದ ಪಾತ್ರಗಳನ್ನು ಮಾಡುವುದರ ಮೂಲಕ ಪ್ರಖ್ಯಾತರಾಗಿ ಹಲವಾರು ಸನ್ಮಾನ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.
ಗುರುಗಳಾದ ರಕ್ಷಿತ್ ಪಡ್ರೆ , ರಾಕೇಶ್ ರೈ ಅಡ್ಕ ಅವರಲ್ಲಿ ಯಕ್ಷಗಾನದ ನಡೆಯನ್ನು ಕಲಿತ ಇವರು ಭರತನಾಟ್ಯವನ್ನು ವಿದುಷಿ ಸುಮಂಗಲಾ ರತ್ನಾಕರ್ ಇವರಲ್ಲೂ ಮೋಹಿನಿಯಾಟ್ಟಂ ಕೇರಳನಟನಂ, ಕೂಚ್ಚುಪುಡಿಯನ್ನ ಕಲಾಮಂಡಲಂ ವಿಮಲಾದೇವಿಯವರಲ್ಲಿ ಕಲಿತಿದ್ದಾರೆ. ಜೊತೆಗೆ ಶಾಸ್ತ್ರೀಯ ಸಂಗೀತವನ್ನ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಅವರಲ್ಲಿ ಕಲಿಯುತ್ತಿದ್ದಾರೆ.
ಮೈತ್ರಿ ಅವರು ಮೂಡಬಿದಿರೆಯಲ್ಲಿ “ತ್ರಿನೇತ್ರ ಕಲಾಕ್ಷೇತ್ರ”ದ ನಿರ್ದೇಶಕಿ, ಶ್ರೀ ದುರ್ಗಾ ಕಲಾ ಕೇಂದ್ರದ ನಿರ್ದೇಶಕಿಯಾಗಿ, ಗುರುವಾಗಿ ನೃತ್ಯತರಗತಿಗಳನ್ನು ನಡೆಸುತ್ತಾ ಕಾರ್ಯಕ್ರಮಗಳನ್ನ ನೀಡುತ್ತಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅನೇಕ ಯಕ್ಷಗಾನ ತಂಡಗಳೊಂದಿಗೆ ಅತಿಥಿ ಕಲಾವಿದೆಯಾಗಿಯೂ ಭಾಗವಹಿಸಿ ವೇದಿಕೆಯಲ್ಲಿ ಹಲವು ಪುರಾಣ ಪಾತ್ರಗಳಲ್ಲಿ ಮಿಂಚಿದ ಪ್ರತಿಭಾವಂತ ಕಲಾವಿದೆ ಕೂಡಾ ಹೌದು. ಸ್ವತಃ ತಾವೇ ಬಣ್ಣ ಹಚ್ಚಿ ರಂಗವನ್ನೇರುವ ಇವರು ಸುದರ್ಶನ, ಮಾಲಿನಿ, ಪದ್ಮಾವತಿ, ಮೋಹಿನಿ, ಶ್ರೀದೇವಿ, ಮಹಿμÁಸುರ, ಗದಾಯುದ್ಧದ ಕೌರವ, ಶತ್ರುಪ್ರಸೂದನ, ಚಂಡಮುಂಡರು, ಮನ್ಮಥ, ರಕ್ತಬೀಜ, ಕರ್ಣ, ಕೃಷ್ಣ, ಬಲರಾಮ, ಶಿಶುಪಾಲ, ಶುಂಭಾಸುರ, ಇಂದ್ರಜಿತು, ಹನೂಮಂತ, ಸೀತಾಪರಿತ್ಯಾಗದಲ್ಲಿ ಲಕ್ಷ್ಮಣ, ಇವುಗಳು ಪ್ರಮುಖವಾದವುಗಳು.
ಮೈತ್ರಿ ಭಟ್ ಅವರು ಸಿದ್ದಿವಿನಾಯಕ ನಾಟ್ಯ ಕಲಾಕೇಂದ್ರ ಸುರತ್ಕಲ್, ಸನಾತನ ನಾಟ್ಯಾಲಯ, ಯಕ್ಷಪೂರ್ಣಿಮಾ, ಶ್ರೀ ವೆಂಕಟ್ರಮಣ ಯಕ್ಷಗಾನ ಕಲಾ ಕೇಂದ್ರ ಕಾಸರಗೋಡು, ಈ ಎಲ್ಲಾ ಯಕ್ಷಗಾನ ತಂಡಗಳಲ್ಲಿ ವೇಷ ಕಟ್ಟಿ ಪಳಗಿದವರು. ಅಜೆಕಾರು ಕಲಾಭಿಮಾನಿ ಬಳಗ ಮುಂಬೈಯಲ್ಲಿ ಕಲಾರತ್ನ ಪ್ರಶಸ್ತಿ, ಯಕ್ಷ ಧ್ರುವ ಪಟ್ಲ ಫೌಂಡೇಷನ್ ವತಿಯಿಂದ ಪ್ರತಿಭಾ ಪುರಸ್ಕಾರ ಹೀಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಬಹುಮುಖ ಕಲಾವಿದೆಯಾಗಿ ತನ್ನನ್ನು ತಾನು ತೊಡಗಿಸಕೊಂಡಿರುವ ಮೈತ್ರಿ ಭಟ್ ಅವರಿಗೆ ಕಲಾ ಮಾತೆ ಶಾರದೆ ಇನ್ನಷ್ಟು ಅವಕಾಶಗಳನ್ನು ಕರುಣಿಸಿ ವಿಶ್ವಪ್ರಖ್ಯಾತಿಯನ್ನು ನೀಡಲಿ ಎಂಬುವುದು ನಮ್ಮ ಹಾರೈಕೆ.