
ಕೊಪ್ಪಳ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಮೂಲಕ ತಮ್ಮ ಮನಸ್ಸಿನ ಮಾತನ್ನು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಸಂವಿಧಾನ ವಿರೋಧಿ ನಡೆಯನ್ನು ತೋರಿಸಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಮುಸ್ಲಿಂರ ಓಲೈಕೆಗಾಗಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ.
ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ.4 ರಷ್ಟು ಮೀಸಲಾತಿ ನೀಡಿದ್ದನ್ನು ಖಂಡಿಸಿ ಸದನದಲ್ಲಿ ಹೋರಾಟ ಮಾಡಿದ್ದೇವೆ. ಡಿ.ಕೆ. ಶಿವಕುಮಾರ್ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾರೆ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ನೀಡಲು ಅವಕಾಶವಿಲ್ಲ.ಆದರೂ ಅದನ್ನು ಬದಲಾಯಿಸುತ್ತೇವೆ ಎಂದಿದ್ದಾರೆ.ಅಲ್ಪಸಂಖ್ಯಾತರಿಗೆ ಧರ್ಮಾಧರಿತ ಮೀಸಲಾತಿ ನೀಡಲು ನಾವು ಬಿಡುವುದಿಲ್ಲ. ಹೋರಾಟ ತೀವ್ರಗೊಳಿಸುವೆವು. ಕಾಂಗ್ರೆಸ್‌ನಲ್ಲಿ ಮುಸ್ಲಿಂ ಮತ ಹಾಗು ಓಲೈಸುವುದಕ್ಕಾಗಿ ತುಷ್ಟೀಕರಣವು ಪರಮೋಚ್ಛ ಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಮುಸ್ಲಿಂರಲ್ಲಿ ಮಾತ್ರ ಬಡವರಿದ್ದಾರಾ ? ಹಿಂದುಗಳಲ್ಲಿ ಬಡವರಿಲ್ಲವಾ? ಸಿಎಂ ಸಿದ್ದರಾಮಯ್ಯ ಹಾಗು ಡಿ.ಕೆ. ಶಿವಕುಮಾರ ಅವರು ಮುಸ್ಲಿಂ ಮೀಸಲಾತಿ ನೀಡಲಿದ್ದಾರೆ. ಇದರ ವಿರುದ್ದ ಏ.1 ರಿಂದ ಏ.3 ರ ವರೆಗೂ ಹೋರಾಟ ನಡೆಯಲಿದೆ ಎಂದರು.
ಹುಬ್ಬಳ್ಳಿ, ಕೊಪ್ಪಳ, ತುಮಕೂರು, ಮೈಸೂರಿನಲ್ಲಿ ಅಹೋರಾತ್ರಿ ನಡೆಯಲಿದೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ರಾಜ್ಯ ನಾಯಕರು ಹುಬ್ಬಳ್ಳಿ, ಕೊಪ್ಪಳ, ತುಮಕೂರು ಹಾಗು ಮೈಸೂರಿನಲ್ಲಿ ಭಾಗಿಯಾಗಲಿದ್ದಾರೆ. ಏ.೦೨ಕ್ಕೆ ಕೊಪ್ಪಳಕ್ಕೆ ವಿಜಯೇಂದ್ರ ಸೇರಿ ಹಲವು ನಾಯಕರು ಆಗಮಿಸಲಿದ್ದಾರೆ ಎಂದರು.
ವಿಧಾನಸೌಧದಲ್ಲಿ ಹೋರಾಟ ಮಾಡಿದ 18 ಶಾಸಕರನ್ನು ಸಭಾಪತಿ ಅಮಾನತು ಮಾಡಿದ್ದಾರೆ.ಇದೊಂದು ಸರ್ವಾಧಿಕಾರಿ ಸರಕಾರವಾಗಿದೆ. ಸಭಾಪತಿಗಳ ಈ ರೀತಿ ಧೋರಣೆ ನಾವು ಸಹಿಸಲ್ಲ. ನಾವು ಬೀದಿಗಿಳಿದು ಹೋರಾಟ ಮಾಡಲಿದ್ದೇವೆ. ಮುಂದೆ ಕಾನೂನು ಹೋರಾಟವನ್ನೂ ಮಾಡಲಿದ್ದೇವೆ. ರಾಜ್ಯದಲ್ಲಿ
ಹನಿಟ್ರಾಪ್, ಮನಿಟ್ರಾಪ್, ಸದನ ಟ್ರಾಪ್ ಆಗುತ್ತಿದೆ ಎಂದರು.
ರಾಜ್ಯದಲ್ಲಿ ತೊಗರಿ ಬೆಳೆಗಾರರಿಗೆ ಪ್ಯಾಕೇಜ್ ನೀಡಬೇಕು. 800 ಕೋಟಿ ರೂಪಾಯಿಯನ್ನು ತೊಗರಿ ಬೆಳೆ ಹಾನಿಗೆ ನೀಡಬೇಕು. ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ ಸಮಾಜದವರ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ. ಎಸ್ಸಿಪಿ, ಟಿಎಸ್ಪಿ ಕಾಯ್ದೆ ತಂದಿದ್ದು ನಾವು ಎಂದು ಸಿದ್ದರಾಮಯ್ಯ ಅವರು ಹೇಳುತ್ತಾರೆ. ಆದರೆ ಗ್ಯಾರಂಟಿಗೆ ಈ ಹಣ ಬಳಕೆ ಮಾಡುತ್ತಿದ್ದಾರೆ. ದಲಿತರಿಗೆ ಇದ್ದ ಹಣ ಬಳಕೆ ಮಾಡಿದ್ದರ ಬಗ್ಗೆ ನಾಚಿಕೆ ಇದ್ದರೆ ಈ ಹಣ ವಾಪಸ್ಸು ನೀಡಬೇಕು ಎಂದು ಒತ್ತಾಯಿಸಿದರು.