ಕರ್ನಾಟಕದಿಂದ ಮತ್ತೆ ನೆರೆ ರಾಜ್ಯಕ್ಕೆ ನೀರು: ರಾಜ್ಯ ಸರ್ಕಾರ ವಿರುದ್ಧ ವಿಜಯೇಂದ್ರ ಕಿಡಿ-ಕಹಳೆ ನ್ಯೂಸ್

ಬೆಂಗಳೂರು : ಕುಡಿಯುವ ನೀರಿನ ಉದ್ದೇಶಕ್ಕಾಗಿ ತೆಲಂಗಾಣಕ್ಕೆ 1.5 ಟಿಎಂಸಿ ನೀರು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ರಾಜ್ಯ ಸರ್ಕಾರ ನಾರಾಯಣಪುರದ ಬಸವಸಾಗರ ಜಲಾಶಯದಿಂದ ರಾತ್ರೋ ರಾತ್ರಿ 10 ಟಿಎಂಸಿ ನೀರು ಹರಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ವಿಜಯಪುರ ಜಿಲ್ಲೆಯ ರೈತರ ಬೆಳೆಗಳಿಗೆ ನೀರು ಸಿಗುತ್ತಿಲ್ಲ.
ಈ ಬಗ್ಗೆ ಕೇಳಿದರೆ ಸರ್ಕಾರದ ಮೌಖಿಕ ಆದೇಶದಿಂದಾಗಿ ನೀರು ಹರಿಸಲಾಗಿದೆ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ನಾಯಕರು ಆರೋಪಿಸಿದ್ದಾರೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕನ್ನಡಿಗರಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ತನ್ನ ಮಿತ್ರ ಪಕ್ಷ ಡಿಎಂಕೆ ಯನ್ನು ಓಲೈಸಲು ತಮಿಳುನಾಡಿಗೆ ನೀರು ಹರಿಯ ಬಿಟ್ಟು ಕಾವೇರಿ ತೀರದ ನಮ್ಮ ರೈತರ ಬದುಕಿಗೆ ಕೊಳ್ಳಿಯಿಟ್ಟಿತ್ತು. ಇದೀಗ ಕೃಷ್ಣಾ ತೀರದ ನಮ್ಮ ರೈತರ ಪರಿಶ್ರಮದ ಬೆವರಿನ ಬೆಳೆಗಳನ್ನು ಒಣಗಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ಮಾನವೀಯತೆಯ ಹೆಸರಿನಲ್ಲಿ ತೆಲಂಗಾಣ ರಾಜ್ಯಕ್ಕೆ 1.5 ಟಿಎಂಸಿ ಯಷ್ಟು ನೀರು ಬಿಡಲಾಗಿದೆ ಎಂದು ಹೇಳಿರುವ ಸಚಿವ ಎಂ.ಬಿ ಪಾಟೀಲ್ ಅವರಿಗೂ ತಿಳಿಯದಂತೆ 10 ಟಿಎಂಸಿ ನೀರು ಹರಿಯಬಿಡಲಾಗಿದೆ ಎಂದರೆ ಈ ನೀರು ಬಿಟ್ಟಿರುವ ಹಿಂದಿನ ಆದೇಶದ ಕಾಣದ ಕೈಗಳು ಯಾವುವು? ಕರ್ನಾಟಕ ಸರ್ಕಾರವನ್ನು ಯಾರು ನಿಯಂತ್ರಿಸುತ್ತಿದ್ದಾರೆ? ಜಲಸಂಪನ್ಮೂಲ ಇಲಾಖೆ ಸರ್ವಾಧಿಕಾರಿಯ ಮುಷ್ಠಿಯಲ್ಲಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಬಿವೈ ವಿಜಯೇಂದ್ರ, ಯತ್ನಾಳ್ ಬಣದ ನಾಯಕರಿಗೆ ನೋಟಿಸ್
ಕರ್ನಾಟಕದ ಜಲ ಸಂಪತ್ತು, ಅರಣ್ಯ ಸಂಪತ್ತು ಹಾಗೂ ಪ್ರಾಕೃತಿಕ ಸಂಪತ್ತುಗಳ ಮೇಲೆ ನಿಯಂತ್ರಣ ಸಾಧಿಸಿರುವ ಕಾಂಗ್ರೆಸ್ ವರಿಷ್ಠ ಮಂಡಳಿ ಕರ್ನಾಟಕದ ನದಿಗಳಿಂದ ಹರಿಯುವ ನೀರನ್ನು ತನ್ನ ಮಿತ್ರ ಪಕ್ಷಗಳು ಹಾಗೂ ತನ್ನ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಹರಿಯ ಬಿಡುವಂತೆ ಸೂಚನೆ ನೀಡುತ್ತಿದೆ.