
ಇವರು ಮೈಕ್ ಹಿಡಿದು ಮಾತಾಡೋಕೆ ಶುರು ಮಾಡಿದ್ರೆ ಮಾತಲ್ಲೇ ಮೋಡಿ ಮಾಡೋ ಸ್ವರ ಮನ್ಮಥ. ತುಳುನಾಡಿನಲ್ಲಿ ಎಲ್ಲೇ ಫಂಕ್ಷನ್ಸ್ ಇರ್ಲಿ ಇವ್ರ ಹೋಸ್ಟೇ ಹೈಲೈಟ್. ಅಪ್ಪಟ ತುಳು ಭಾಷೆಯಲ್ಲಿ ಹೋಸ್ಟ್ ಮಾಡಿ ಜನರನ್ನು ರಂಜಿಸೋದು ಇವರ ಟ್ಯಾಲೆಂಟ್. ಅವರೇ ಸ್ವರ ಮನ್ಮಥ ಬಿರುದಾಂಕಿತ ವಿಜೆ ಮಧುರಾಜ್ ಗುರುಪುರ.
ಹೌದು. ತುಳುನಾಡಿನಲ್ಲಿ ಎಲ್ಲೇ ಕಾರ್ಯಕ್ರಮಗಳು ಇರಲಿ ವಿಜೆ ಮಧುರಾಜ್ ಅವರ ಹೋಸ್ಟ್ ಅಂದಮೇಲೆ ಅಲ್ಲಿ ಮನೋರಂಜನೆಗೇನೂ ಕೊರತೆ ಇಲ್ಲ. ತನ್ನ ಅದ್ಭುತ ಧ್ವನಿಯ ಮೂಲಕ ಇಡೀ ಪ್ರೇಕ್ಷರನ್ನು ಹಿಡಿದಿಟ್ಟುಕೊಳ್ಳುವ ಕಲೆ ಇವರಲ್ಲಿದೆ. ಅಂದ ಹಾಗೆ ವಿಜೆ ಮಧುರಾಜ್ ಅವರು ಹುಟ್ಟಿದ್ದು ವಿಟ್ಲದ ಅಳಿಕೆ ಗ್ರಾಮದಲ್ಲಿ. ತಾಯಿ ಇಂದಿರಾ ಹಾಗೂ ತಂದೆ ನಾರಾಯಣ ದಂಪತಿ ಪುತ್ರ. ಅಣ್ಣ ಭಾಗ್ಯರಾಜ್ ಅವರ ಮುದ್ದಿನ ತಮ್ಮ ಮಧುರಾಜ್. ಸದ್ಯ ಸ್ವಸ್ತಿಕಾ ಬ್ಯುಸಿನೆಸ್ ಸ್ಕೂಲ್ ಮಂಗಳೂರು ಇಲ್ಲಿನ ಉಪಾನ್ಯಾಸಕಿ ಸಂಗೀತ ಎಂಬವರ ಜೊತೆಗೆ ಇತ್ತೀಚಿಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಸಂಗೀತ ಅವರ ಜೊತೆಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ತಮ್ಮ ಪ್ರಾಥಾಮಿಕ ಶಿಕ್ಷಣವನ್ನು ಅನುದಾನಿತ ಹಿಂದೂ ಹಿರಿಯ ಪ್ರಾಥಾಮಿಕ ಶಾಲೆ ಗುರುಪುರದಲ್ಲಿ ಮಾಡಿದ್ದು, ರೋಸಾ ಮಿಸ್ತಿಕಾ ಕಿನ್ನಿಕಂಬಳ ಇಲ್ಲಿ ಹೈಸ್ಕೂಲ್, ಗುರುಪುರ ಸರಕಾರಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಶ್ರೀ ನಿರಂಜನ ಸ್ವಾಮಿ ಕಾಲೇಜು ಸಂಕದಕಟ್ಟೆ ಬಜ್ಪೆಯಲ್ಲಿ ಪದವಿ ಶಿಕ್ಷಣ ಮಾಡಿದ್ದಾರೆ.
ತಮ್ಮ ಶಾಲಾ ಜೀವನದಲ್ಲೇ ಛದ್ಮವೇಷ, ಹಾಡುಗಾರಿಕೆ, ನಾಟಕದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಇವರ ಕಲಾ ಪ್ರತಿಭೆಗೆ ಬಹುದೊಡ್ಡ ವೇದಿಕೆ ಕಲ್ಪಿಸಿದ್ದು ಶ್ರೀ ನಿರಂಜನ ಸ್ವಾಮಿ ಕಾಲೇಜು ಹಾಗೂ ಅಲ್ಲಿನ ಉಪನ್ಯಾಸಕ ವೃಂದ. ಮನೆಯಲ್ಲೂ ತಂದೆ ತಾಯಿ ಅಣ್ಣನ ಪ್ರೋತ್ಸಾಹವಿತ್ತು. ಹಾಗಾಗಿ ಇಂದು ತುಳುನಾಡೇ ಕೊಂಡಾಡುವಂತಹ ದೊಡ್ಡ ನಿರೂಪಕನಾಗಿ ಹೊರಹೊಮ್ಮಿದ್ದಾರೆ.
ಕಾಲೇಜು ಜೀವನದಲ್ಲಿ 5 ಬಾರಿ ಉತ್ತಮ ನಿರೂಪಕ ಪ್ರಶಸ್ತಿಯನ್ನು ಪಡೆದಿದ್ದ ಮಧುರಾಜ್ ಅವರಿಗೆ ಮುಂಬಾಯಿ ಕರ್ನಾಟಕ ಸಂಘದಿಂದ ಸ್ವರ ಮನ್ಮಥ ಎಂಬ ಬಿರುದು ಸಿಕ್ಕಿದೆ. ಖಾಸಗಿ ವಾಹಿನಿಗಳಲ್ಲಿ ನ್ಯೂಸ್ ಆಂಕರ್ ಆಗಿಯೂ ಕೆಲಸ ಮಾಡಿದ್ದಾರೆ. ಇದೀಗ ನಿರೂಪಣೆಯನ್ನೇ ತನ್ನ ಜೀವನವಾಗಿಸಿಕೊಂಡಿದ್ದು, ತುಳು ಹಾಗೂ ಕನ್ನಡ ನಿರೂಪಣೆ ಮಾಡಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಅದೆಷ್ಟೋ ವೇದಿಕೆಗಳಲ್ಲಿ ಹಲವಾರು ಸನ್ಮಾನ ಪುರಸ್ಕಾರಗಳು ಕೂಡಾ ದೊರೆತಿದೆ. ಅಷ್ಟೇ ಅಲ್ಲ ‘ಸೊಲ್ಮೆ’ ಎಂಬ ಯೂಟ್ಯೂಬ್ ಚಾನೆಲ್ ಶುರು ಮಾಡಿ ತುಳುನಾಡಿನಲ್ಲಿ ಯಾರೂ ಅರಿಯದ ಅದೆಷ್ಟೋ ವಿಷಯಗಳನ್ನೂ ಹೊರ ತಂದಿದ್ದಾರೆ.
ಅದೇನೆ ಆಗ್ಲಿ ನಿರೂಪಣಾ ಕಲೆಯನ್ನೇ ಮೈಗೂಡಿಸಿಕೊಂಡು ತನ್ನ ಮಾತಿನಲ್ಲೇ ಎಲ್ಲರನ್ನು ರಂಜಿಸುವ ವಿಜೆ ಮಧುರಾಜ್ ಗುರುಪುರ ಅವರ ನಿರೂಪಣಾ ಜೀವನ ಇನ್ನಷ್ಟು ಎತ್ತರಕ್ಕೆ ಬೆಳೆದು ದೇಶ, ವಿದೇಶಗಳಲ್ಲೂ ಇವರಿಗೆ ಹೆಸರು ತಂದು ಕೊಡಲಿ ಎಂಬುವುದು ನಮ್ಮ ಹಾರೈಕೆ.