
ಪುಂಜಾಲಕಟ್ಟೆ: ನನೆಗುದಿಗೆ ಬಿದ್ದಿದ್ದ ಅಜಿಲಮೊಗರು ಸೌಹಾರ್ದ ಸೇತುವೆ ಕಾಮಗಾರಿ ಇನ್ನೇನು ಈ ಮಳೆಗಾಲಕ್ಕೆ ಪೂರ್ಣಗೊಳ್ಳುತ್ತದೆ ಎಂದು ಜನ ಅಂದಕೊಳ್ಳುತ್ತಿರುವಾಗಲೇ ಮರು ಆರಂಭಗೊಂಡ ಕೆಲಸ ಎರಡೇ ದಿನದಲ್ಲಿ ಮತ್ತೆ ಸ್ಥಗಿತಗೊಂಡಿದ್ದು, ಸೌಹಾರ್ದ ಸೇತುವೆ ಹೋರಾಟ ಸಮಿತಿ ಹಾಗು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.
ಏಳು ವರ್ಷಗಳ ಹಿಂದೆ ಆರಂಭಗೊಂಡಿದ್ದ ಈ ಸೇತುವೆ ನಿಧಾನಗತಿಯ ಕಾಮಗಾರಿಯಿಂದಾಗಿ ಇನ್ನೂ ಪೂರ್ಣಗೊಂಡಿಲ್ಲ. ಅಜಿಲಮೊಗರು ಮಸೀದಿ ಮುಂಭಾಗದಿಂದ ಕಡೇಶ್ವಾಲ್ಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಸಂಪರ್ಕಿಸುವ ದೆಸೆಯಲ್ಲಿ ನೇತ್ರಾವತಿ ನದಿಗೆ ಸೇತುವೆ ಮತ್ತು ಸಂಪರ್ಕ ರಸ್ತೆಯ ಸೌಹಾರ್ದ ಸೇತುವೆ ಕಾಮಗಾರಿ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು, ಜನರ ಸಹನೆಯನ್ನು ಪರೀಕ್ಷಿಸುತ್ತಿದೆ.
ಸೌಹಾರ್ದ ಸೇತುವೆ ಮತ್ತು ಸಂಪರ್ಕ ರಸ್ತೆ ಯೋಜನೆಗೆ ನೀಲನಕಾಶೆ ಸಿದ್ದಗೊಂಡು 2017ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆಯಾಗಿದ್ದು, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ ಡಿಸಿಎಲ್)ದಿಂದ 19.84 ಕೋಟಿ ರೂ. ಅನುದಾನ ಮಂಜೂರುಗೊಂಡಿತ್ತು. ಅಜಿಲಮೊಗರಿನಿಂದ ಕಡೇಶ್ವಾಲ್ಯಕ್ಕೆ ಒಟ್ಟು 312 ಮೀ. ಉದ್ದ ಮತ್ತು 10.50 ಮೀ. ಅಗಲದ ಸೇತುವೆ ಜತೆಗೆ ಒಟ್ಟು 378 ಮೀ. ಉದ್ದದ ಸಂಪರ್ಕ ರಸ್ತೆ ಕಾಮಗಾರಿಯನ್ನು ಚೆನ್ನೈನ ಎಸ್‌ಪಿಎಲ್ ಕಂಪನಿ ಗುತ್ತಿಗೆ ವಹಿಸಲಾಗಿತ್ತು. 2021ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಒಪ್ಪಂದ ಮಾಡಲಾಗಿತ್ತು.
ಕಾಮಗಾರಿ ಮುಗಿಯದಿರುವ ಕುರಿತು ಹೋರಾಟ ಸಮಿತಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ. ಸುದಿನದಲ್ಲಿ ವರದಿ ಪ್ರಕಟಿಸಿದ ಬೆನ್ನಲ್ಲೆ ತಹಶೀಲ್ದಾರ್ ಅರ್ಚನಾ ಭಟ್ ಅವರು ಅಜಿಲಮೊಗರಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಬಳಿಕ ಕಾಮಗಾರಿ ಆರಂಭಗೊಂಡ ಲಕ್ಷಣಗಳು ಕಾಣಿಸಿದ್ದವಾದರೂ ಇದೀಗ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹೋರಾಟ ಸಮಿತಿಯ ಆದಂ ಕುಂಞಿ ಅವರು ತಿಳಿಸಿದ್ದಾರೆ.
ಶೀಘ್ರ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿ ಪ್ರತಿಭಟನೆ ನಡೆಸುವುದಾಗಿ ಅವರು ಸಂಬಂಧಿತ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.