
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನದಲ್ಲಿ ನಿಯಮ ಉಲ್ಲಂಘನೆಯಾಗುತ್ತಿದ್ದು, ನಿರ್ವಹಣೆ ಸರಿಯಾಗಿಲ್ಲ, ಇದರಿಂದ ಅಲ್ಲಿರುವ ಪ್ರಾಣಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಬೇಕು ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿಎನ್‌ಎಚ್‌ಎಸ್) ಎನ್ನುವ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.
ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ಇತ್ಯರ್ಥಗೊಳ್ಳುವವರೆಗೆ ಪಿಲಿಕುಳ ಜೈವಿಕ ಉದ್ಯಾನವನವನ್ನು ಮುಚ್ಚಬೇಕು ಎಂದು ಕೋರಲಾಗಿದೆ.
ಕಳೆದ ಅಕ್ಟೋಬರ್ 31ರಂದು ಮಂಗಳೂರಿನ ವನ್ಯಜೀವಿ ಸಂರಕ್ಷಣಾಸಕ್ತ ಭುವನ್ ಹಾಗೂ ಹೈಕೋರ್ಟ್ ವಕೀಲ ಅಶ್ವಿನ್ ಜಾಯ್‌ಸ್ಟನ್ ಕುಟಿನ್ಹ ಎಂಬವರು ಸ್ವತಂತ್ರವಾಗಿ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಅಧ್ಯಯನ ನಡೆಸಿ ದ್ದರು. ಅಲ್ಲಿರುವ ಪ್ರಾಣಿಗಳ ಪಂಜರಗಳು ಕೇಂದ್ರ ಮೃಗಾಲಯ ಪ್ರಾಧಿಕಾರದ ಸೂಚಿತ ನಿಯಮಾವಳಿಗಳಿಗೆ ಅನುಸಾರವಾಗಿ ನಡೆದಿದೆಯೇ ಎಂಬುದನ್ನು ಪರಿ ಶೀಲಿಸಿದ್ದರು. ಈ ಕುರಿತು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿ ಕೇಳಿದರೂ ಸೂಕ್ತ ಮಾಹಿತಿ ಸಿಗಲಿಲ್ಲ. ಅಂತಿಮವಾಗಿ ಈ ವರದಿಯನ್ನು ಕೇಂದ್ರ ಮೃಗಾಲಯ ಪ್ರಾಧಿಕಾರ, ಮುಖ್ಯ ವನ್ಯಜೀವಿ ವಾರ್ಡನ್, ಅರಣ್ಯ ಇಲಾಖೆ ಪ್ರಧಾನ ಸಂರಕ್ಷಣಾಧಿಕಾರಿಯವರಿಗೆ ಸಲ್ಲಿಸಲಾಗಿದೆ. ಇಷ್ಟಾದರೂ ವ್ಯವಸ್ಥೆ ಸುಧಾರಣೆಗೆ ಯಾವುದೇ ಕ್ರಮಗಳನ್ನು ಪ್ರಾಧಿಕಾರದವರು ಕೈಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿದೆ ಎಂದು ಸಂಸ್ಥೆ ಪ್ರಕಟನೆ ತಿಳಿಸಿದೆ.