ಸಂತಸದಾಯಕ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿವಿನ ಬಗ್ಗೆ ಆಸಕ್ತಿಯು ಮೂಡುತ್ತದೆ- ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ -ಕಹಳೆ ನ್ಯೂಸ್

ಬಂಟ್ವಾಳ : ಮಗು ತನ್ನ ಮನೆಯಿಂದ ಹೊರಗಿನ ಪ್ರಪಂಚಕ್ಕೆ ಕಲಿಕೆಯ ವಾತಾವರಣಕ್ಕೆ ಹೋಗುವ ಸನ್ನಿವೇಶವೇ ಪೂರ್ವ ಪ್ರಾಥಮಿಕ ತರಗತಿಗಳು ಈ ತರಗತಿಗಳು ತನ್ನ ಜೀವನದಲ್ಲಿ ಬದುಕನ್ನು ಕಟ್ಟಿಕೊಳ್ಳುವ ಅಡಿಪಾಯವಾಗಿದೆ. ಮಾಧ್ಯಮಗಳು ಯಾವುದೇ ಆಗಿರಲಿ ಕಲಿಕೆ ಮುಖ್ಯವಾಗಿದೆ, ಸಂತಸದಾಯಕ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿವಿನ ಬಗ್ಗೆ ಆಸಕ್ತಿಯು ಮೂಡುತ್ತದೆ ಇದನ್ನು ಪೂರ್ವ ಪ್ರಾಥಮಿಕ ತರಗತಿಗಳು ಮುಂದಿನ ಹಂತಗಳಿಗೆ ಮಕ್ಕಳನ್ನು ಹೊಂದಿಕೊಳ್ಳುವಂತೆ ಮಾಡುತ್ತವೆ ಎಂಬುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಹೇಳಿದರು.
ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ನಡೆದ ಪೂರ್ವ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿ ಮಾತನಾಡಿ ಗುಣಮಟ್ಟದ ಶಿಕ್ಷಣದೊಂದಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಜಿ ಶಾಲೆಯು ತಾಲೂಕಿಗೆ ಮಾದರಿ ಶಾಲೆಯಾಗಿದೆ ಅಂದರು.
ಸರಕಾರಿ ಶಾಲೆಗಳು ಉತ್ತಮವಾದ ಕಲಿಕಾ ಪರಿಸರವನ್ನು ಹೊಂದಿದ್ದು ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸಫಲತೆಯನ್ನು ಪಡೆದಿವೆ, ಇಂದಿನ ಸಮಾಜದಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದ ಹುದ್ದೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಅಲ್ಲದೆ ಸರಕಾರಿ ಶಾಲೆಗಳು ಜೀವನಕ್ಕೆ ಹತ್ತಿರವಾದ ಕಲಿಕೆಯನ್ನು ಮೂಡಿಸುತ್ತದೆ ಎಂಬುದಾಗಿ ಶ್ರೀ ಸಾಯಿ ಅರ್ಥ್ ಮೂವರ್ಸ್ ಮಾಲಕ
ಕಿಶೋರ್ ಕುಮಾರ್ ಕಟ್ಟೆಮಾರ್ ಪೂರ್ವ ಪ್ರಾಥಮಿಕ ಮಕ್ಕಳಿಗೆ ಪದಗ್ರಹಣದ ಸಮವಸ್ತ್ರ ವನ್ನು ಉಚಿತವಾಗಿ ಒದಗಿಸಿ ಮಾತನಾಡಿದರು.
ಒಂದು ಸಂಸ್ಥೆಯ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಜೊತೆಗೆ ವಿದ್ಯಾರ್ಥಿಗಳ ಕಲಿಕೆಯು ಮಹತ್ವವನ್ನು ಪಡೆಯುತ್ತದೆ, ವಿದ್ಯಾರ್ಥಿಗಳ ಕಲಿಕಾ ಮಟ್ಟವು ಉತ್ತಮವಾದ ಪೋಷಕರು ಶಾಲೆಯ ಬಗ್ಗೆ ಹೆಚ್ಚಿನ ಗಮನವನ್ನು ಹೊಂದಲು ಸಾಧ್ಯವಾಗುತ್ತದೆ, ಶಾಲೆಗಳು ಭೌತಿಕ ಅಭಿವೃದ್ಧಿಯ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಯನ್ನು ಉತ್ತಮಪಡಿಸಿ ಕೊಂಡಾಗ ಸರ್ವತೋಮುಖ ಬೆಳವಣಿಗೆಯನ್ನು ಹೊಂದಲು ಸಾಧ್ಯವಾಗುತ್ತದೆ ಎಂಬುದಾಗಿ. ಶಾಲಾ ಹಿರಿಯ ವಿದ್ಯಾರ್ಥಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ನಿರ್ದೇಶಕ ವಿಶ್ವನಾಥ
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ನೀಡಲಾದ ದೈಹಿಕ ಶಿಕ್ಷಣ ಪಠ್ಯದ ಪೂರಕ ವಾದ್ಯಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಶಾಲೆಯಿಂದ ತೆರಳುತ್ತಿರುವ ಶಿಕ್ಷಕಿ ಹೇಮಲತಾ ರವರನ್ನು ಶಾಲಾ ಪರವಾಗಿ ಅಭಿನಂದಿಸಿ ಬೀಳ್ಕೊಡಲಾಯಿತು .
ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಂದ ಅಭಿನಯ ಗೀತೆ, ನೃತ್ಯ ಮೂಡಿಬಂದವು, ಹಾಗೂ ತಮ್ಮ ಅನುಭವವನ್ನು ಮಾತಿನ ಮೂಲಕ ಹಂಚಿಕೊಂಡರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ, ವಿರಕಂಬ ಗ್ರಾಮ ಪಂಚಾಯತ್ ಸದಸ್ಯ ಮೀನಾಕ್ಷಿ ಸುನಿಲ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೂರ್ವ ಪ್ರಾಥಮಿಕ ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು .
ಮುಖ್ಯ ಶಿಕ್ಷಕಿ ಬೆನೆಡಿಕ್ಟ್ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಸಹ ಶಿಕ್ಷಕಿ ಸಂಗೀತ ಶಮಾ೯ ಪಿ ಜಿ ವಂದಿಸಿದರು. . ಶಿಕ್ಷಕಿಯರಾದ ಪಲ್ಲವಿ ಹಾಗೂ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.