
ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳನ್ನು ಅವಕಾಶ ವಂಚಿತರಾಗಿಸಿದ ಘಟನೆ ವರದಿಯಾಗಿದೆ.
ಖಾಸಗಿ ಶಾಲೆಗಳು ಶೇ. ನೂರು ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಬತ್ತನೇ ತರಗತಿಯಿಂದಲೇ ಬೇರೆ ಶಾಲೆಗೆ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳಿದ್ದು, ಸರಕಾರಿ ಶಾಲೆಗಳಲ್ಲೂ ಈ ಪ್ರವೃತ್ತಿ ಆರಂಭವಾಗಿರುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಮಕ್ಕಳ ಹಕ್ಕುಗಳ ಆಯೋಗ, ಉಪನಿರ್ದೇಶಕರು, ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಎಸ್ಟಿ ಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯ ಸಂಚಾಲಕರಿಗೆ ಪತ್ರ ಬರೆದಿದ್ದಾಳೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಮುಂದಿನ 3 ಪರೀಕ್ಷೆಗಳಿಗೆ ಹಾಜರಾಗುವಂತೆ ಹೇಳಿ ಪರೀಕ್ಷಾ ಪ್ರವೇಶ ಪತ್ರ ಕೊಡಿಸಿದರು.
ಆದರೂ ವಾಪಸು
ವಿಚಿತ್ರವೆಂದರೆ ಓರ್ವ ವಿದ್ಯಾರ್ಥಿನಿ ಪರೀಕ್ಷೆ ಪ್ರವೇಶ ಪತ್ರ ಪಡೆದು ಸ್ವಲ್ಪ ಹೊತ್ತಿನ ಬಳಿಕ ವಾಪಸು ಕೊಟ್ಟಿದ್ದಾಳೆ ಎನ್ನಲಾಗಿದೆ. ಜತೆಗೆ ಮತೊಬ್ಬಳೂ ಪ್ರವೇಶ ಪತ್ರ ಪಡೆಯಲಿಕ್ಕೇ ಹಿಂಜರಿಯುತ್ತಿದ್ದಾಳೆ. ಇದರ ಹಿಂದೆ ಬೇರೆ ವ್ಯಕ್ತಿಗಳ ಕೈವಾಡವಿದ್ದು, ಪರೀಕ್ಷೆಗೆ ಹಾಜರಾಗದಂತೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪರೀಕ್ಷೆ ಬರೆಸುವ ಆಲೋಚನೆ ಇತ್ತು. ಆದರೆ ಅದಕ್ಕೆ ಅವಕಾಶ ನೀಡುತ್ತಿಲ್ಲ. ಘಟನೆ ಕುರಿತು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.