
ಮಂಗಳೂರು, ಮಾ. 29: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಾಣುಜೀವ ಶಾಸ್ತ್ರ ವಿಭಾಗದ ವತಿಯಿಂದ ಮಜ್ಜಿಗೆ ಹಬ್ಬವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಭಾರತದ ಸೂಕ್ಷ್ಮಾಣುಜೀವ ಶಾಸ್ತ್ರ ಸಮಾಜದ ಸಂಸ್ಥಾಪಕ ಅಧ್ಯಕ್ಷ ಡಾ. ದೇಶ್ಮುಖ್ ಅವರು ಉದ್ಘಾಟಿಸಿ, ಜನರು ಟೀ, ಕಾಫಿ ಅಥವಾ ಇತರ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವ ಬದಲು ಆರೋಗ್ಯಕರ ಮಜ್ಜಿಗೆ ಕುಡಿಯುವಂತೆ ಪ್ರೋತ್ಸಾಹಿಸಲು ಈ ಅಭಿಯಾನ ಪ್ರಾರಂಭಿಸಿರುವುದಾಗಿ ತಿಳಿಸಿದರು.
ಮಜ್ಜಿಗೆ ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತದೆ. ಅಲ್ಲದೇ, ಆರೋಗ್ಯಕರ ಪಾನೀಯವಾಗಿದ್ದು, ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಮಜ್ಜಿಗೆಯಲ್ಲಿ ಆರೋಗ್ಯಕರ ಅಂಶಗಳಿದ್ದು, ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಕರುಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಬೇಕಾದ ಉತ್ತಮ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ದೀರ್ಘಾಯುಷ್ಯದೊಂದಿಗೆ ಆರೋಗ್ಯಕರ ಜೀವನ ಶೈಲಿ ಹೆಚ್ಚಿಸುವಲ್ಲಿ ಮಜ್ಜಿಗೆಯು ಮಹತ್ವಪೂರ್ಣವಾದುದು ಎಂದು ತಿಳಿಸಿದರು.
ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು 25 ವಿವಿಧ ರೀತಿಯ ಮಜ್ಜಿಗೆಯನ್ನು ತಯಾರಿಸಿ ಪ್ರದರ್ಶನ ಮಾಡಿದ್ದರು.ಮಜ್ಜಿಗೆ ಕುಡಿಯಿರಿ ಆರೋಗ್ಯವಾಗಿರಿ ಎಂಬ ಘೋಷಣೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಜಯವಂತ್ ನಾಯಕ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ, ಸೂಕ್ಷ್ಮಾಣುಜೀವ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್, ಪ್ರಾಣಿಶಾಸ್ತ್ರ ವಿಭಾಗದ ಡಾ. ಗೀತಾ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶೋಭಾ, ಸುಮಂಗಲಾ ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಭಾಗವಹಿಸಿದ್ದರು.