
ಬೆಳಗಾವಿ :ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಹಣವನ್ನು ಖಜಾನೆಗೆ ಕಳುಹಿಸಿದ್ದು, ಯುಗಾದಿ ಮತ್ತು ರಾಮ್ಜಾನ್ ಹಬ್ಬದ ಸಂದರ್ಭದಲ್ಲಿ ಖುಷಿಯ ವಿಚಾರ. ಫೆಬ್ರವರಿ ತಿಂಗಳ ಹಣವನೂ ಶೀಘ್ರವೇ ನೀಡುತ್ತೇವೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವಿವಾರ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಇನ್ನೆರಡು ದಿನಗಳಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದರು.
ಯತ್ನಾಳ್ ವಿರುದ್ಧ ವಾಗ್ದಾಳಿ
”ಯತ್ನಾಳ್ ಅವರು ನಮ್ಮ (ಪಂಚಮಸಾಲಿ) ಸಮಾಜದ ಹಿರಿಯರು ಎಂದು ಚೌಕಟ್ಟಿನಲ್ಲಿ ಗೌರವ ನೀಡುತ್ತಿದ್ದೆವು. ಅವರು ನಾಲಗೆ ಹರಿಬಿಡುವುದರಿಂದ ಬಿಜೆಪಿ ಉಚ್ಚಾಟಿಸಿದೆ. ಅವರ ಮಾತಿನ ರೀತಿ ಗಮನಿಸಿದರೆ ನಾಲಗೆ ಮತ್ತು ತಲೆಗೆ ಕನೆಕ್ಷನ್ ತಪ್ಪಿದೆ” ಎಂದರು.
‘ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಶೇ.80ರಷ್ಟು ಪಂಚಮಸಾಲಿಗರು ಬಿಜೆಪಿಯಲ್ಲಿದ್ದಾರೆ ಎಂದಿದ್ದು ನನ್ನ ಮನಸ್ಸಿಗೆ ಬಹಳಷ್ಟು ನೋವು ತಂದಿದೆ. ಪಂಚಮಸಾಲಿ ಹೋರಾಟ ಪಕ್ಷಾತೀತ, ನಾವೆಲ್ಲರೂ ಪಾಲ್ಗೊಂಡಿದ್ದೆವು. ಮೀಸಲು ಕ್ಷೇತ್ರಗಳು ಸೇರಿ ಇನ್ನುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಲಿಂಗಾಯತ ಪಂಚಮಸಾಲಿಗರು ಕಾರಣ’ ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.
‘ಸಂಪೂರ್ಣ ಪಂಚಮಸಾಲಿ ಸಮುದಾಯವನ್ನು ಯತ್ನಾಳ್ ಅವರಿಗೆ ಬರೆದುಕೊಟ್ಟಿಲ್ಲ. ಏ.13ರಂದು ಬೆಳಗಾವಿಯಲ್ಲಿ ಯತ್ನಾಳ್ ಪರ ಹಮ್ಮಿಕೊಂಡಿರುವ ಪ್ರತಿಭಟನೆ ವೈಯಕ್ತಿಕ. ಸ್ವಾಮೀಜಿಗಳು ಸರಕಾರಕ್ಕೆ ಮಾರ್ಗದರ್ಶನ ಕೊಡಬೇಕು. ತಪ್ಪಿದ್ದರೆ ಸಲಹೆ ನೀಡಬೇಕು. ಅದೂ ಇತಿಮಿತಿಯಲ್ಲಿ ಇರಬೇಕೆ ಹೊರತು ಅತಿಯಾಗಬಾರದು” ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.