
ಉಡುಪಿ: ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಹೆರವಳ್ಳಿಯಲ್ಲಿ ವಿಜಯನಗರ ಕಾಲದ ಶಾಸನ ಪತ್ತೆಯಾಗಿದೆ. ಶಾಸನದಲ್ಲಿ ಶೃಂಗೇರಿ ಮಠದ 14ನೇ ಶ್ರೀಗಳಾದ ಶ್ರೀ ನರಸಿಂಹ ಭಾರತಿ ಶ್ರೀಪಾದರು (ಹಾಲಾಡಿ ಒಡೆಯರು) ಭೂ ದಾನ ನೀಡಿರುವ ಸಾಧ್ಯತೆಯ ಬಗ್ಗೆ ಶೃಂಗೇರಿ ಮಠದ ಸಂಶೋಧಕರು ಹೇಳಿದ್ದಾರೆ.
ಪುರಾತನ ಈ ಶಿಲಾಶಾಸನ ಶ್ರೀ ಶಂಕರ ನಾರಾಯಣ ಕ್ಷೇತ್ರ ಮತ್ತು ಪಂಚಗ್ರಾಮ ಬ್ರಾಹ್ಮಣ ಸಮುದಾಯದ ಪುರಾವೆಗಳಿಗೆ ಪೂರಕವಾಗುವ ಸಾಧ್ಯತೆ ಇದೆ.
ಹೆರವಳ್ಳಿಯ ಪ್ರಶಾಂತ್ ಹೆಗ್ಡೆ ಅವರ ಮನೆಯ ಅಂಗಳದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ 14ನೇ ಜಗದ್ಗುರು, ಹಾಲಾಡಿ ಒಡೆಯರೆಂದು ಖ್ಯಾತರಾಗಿದ್ದ ಶ್ರೀ ನರಸಿಂಹ ಭಾರತಿ ಗುರುಗಳು, ಶ್ರೀ ತೀರ್ಥಮುತ್ತೂರು ಮಠದ ಶ್ರೀ ಜ್ಞಾನೇಂದ್ರ ಭಾರತಿ ಗುರುಗಳವರಿಗೆ ಭೂ ದಾನ ನೀಡಿರುವ ಶಿಲಾಶಾಸನ ಇದಾಗಿದೆ ಎನ್ನಲಾಗಿದೆ.
ಈ ಶಾಸನ 5 ಅಡಿಗಿಂತ ಎತ್ತರವಿದೆ. ಎರಡೂ ಕಾಲು ಅಡಿ ಆಗಲವಿದೆ. ಕನ್ನಡ ಲಿಪಿಯಲ್ಲಿ ಶಿಲೆಕಲ್ಲಿನಲ್ಲಿ ಶಾಸನವನ್ನು ಬರೆಯಲಾಗಿದೆ. ಶಾಸನದ ಬಲ ಭಾಗದಲ್ಲಿ ಕೈ ಮುಗಿದು ಕುಳಿತಿರುವ ಭಕ್ತರ ಚಿತ್ರ ಇದೆ.
ಒಂದು ದೀಪದ ಕಂಬ ಹಾಗೂ ಮಧ್ಯಭಾಗದಲ್ಲಿ ಶಿವಲಿಂಗವಿದೆ. ಶಾಸನದ ಎಡಭಾಗದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಗೋವು ಹಾಗೂ ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಈ ಶಾಸನವು ವಿಜಯನಗರದ ಅರಸ ಇಮ್ಮಡಿ ಹರಿಹರರಾಯನ ಕಾಲಘಟ್ಟದ ಶಾಸನವಾಗಿದೆ ಎನ್ನಲಾಗುತ್ತಿದೆ.
ವಿದ್ಯಾರ್ಥಿಗಳಿಂದ ಸಂಶೋಧನೆ: ಈ ಶಾಸನದಲ್ಲಿ ಶ್ರೀ ಮತ್ಪರಮಹಂಸ ಶ್ರೀ ನರಸಿಂಹ ಭಾರತೀ ಶ್ರೀಪಾದರು ಹಾಗೂ ಇತರ ಶ್ರೀಪಾದರ ಹೆಸರು ಕಂಡುಬಂದಿದ್ದು, ಇದರ ಮುಂದಿನ ಅಕ್ಷರಗಳು ಅಸ್ಪಷ್ಟವಾಗಿದೆ. ಶಾಸನದ ಸ್ವಲ್ಪ ಭಾಗ ಮಣ್ಣಿನಲ್ಲಿರುವುದನ್ನು ತೆಗೆದು ನೋಡಬೇಕು. ರಾಜ್ಯ ಪುರಾತತ್ವ ಇಲಾಖೆ ಗಮನ ಹರಿಸಬೇಕು. ಶಾಸನದ ಬಗ್ಗೆ ಕ್ರೋಢ ಶ್ರೀ ಶಂಕರನಾರಾಯಣ ದೇವಸ್ಥಾನದ ಆರ್ಚಕ ಶಿವಪ್ರಸಾದ್ ಅಡಿಗರು ಬೆಳಕು ಚೆಲ್ಲಿದ್ದಾರೆ.
ತುಮಕೂರು ವಿವಿ ಸಂಶೋಧನಾರ್ಥಿ ಶಶಿಕುಮಾರ್ ನಾಯ್ಕ ಅವರು ಶಾಸನದ ಪ್ರತಿ ತೆಗೆಯಲು ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಶಿವಾನಂದ ಐತಾಳ್ ಹಾಗೂ ನಿಖೀತ್ ಕುಮಾರ್ ಅವರು ಶಾಸನವನ್ನು ಸ್ವತ್ಛಗೊಳಿಸಿದರು. ಪಂಚಗ್ರಾಮ ಬ್ರಾಹ್ಮಣ ಸಮುದಾಯದ ಬಗ್ಗೆ ಸಂಶೋಧನೆ ಮಾಡುತ್ತಿರುವ ತುಮಕೂರು ವಿಶ್ವವಿದ್ಯಾನಿಲಯ ಸಂಶೋಧಕಿ ವೈಶಾಲಿ ಜಿ.ಆರ್. ಸಿದ್ದಾಪುರ ಅವರು ಶಾಸನದ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ.