ಬ್ರಹ್ಮಶ್ರೀ ನಾರಾಯಣ ಗುರುಗಳ ಸರಳತೆಯ ಸೂತ್ರ ಪಾಲಿಸಿದರೆ ಬದುಕು ಸುಂದರ; ಸಂದೀಪ್ ಸಾಲ್ಯಾನ್-ಕಹಳೆ ನ್ಯೂಸ್

ಬಂಟ್ವಾಳ: ವಿದ್ಯೆಯಿಂದ ಸ್ವತಂತ್ರರಾಗಬೇಕಾದ ಇಂದಿನ ಯುವ ಸಮುದಾಯ ವಿದ್ಯಾವಂತರಾದರೂ ಸರಿ, ತಪ್ಪುಗಳನ್ನು ಸ್ವತಂತ್ರವಾಗಿ ಯೋಚಿಸಿ, ತೀರ್ಮಾನಿಸುವ ಶಕ್ತಿಯನ್ನು ಕಳೆದುಕೊಂಡಿದೆ, ಸಂಘಟನೆಯಿಂದ ಬಲಯುತರಾಗ ಬೇಕಾದವರು ಜಾತಿ, ಧರ್ಮದ ಹೆಸರಿನಲ್ಲಿ ಸಂಘಟನೆಯಾಗದೆ ವಿಘಟನೆಯಾಗುತ್ತಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಪರಿಕಲ್ಪನೆ ವಿಶಾಲವಾದ ಅರ್ಥವನ್ನು ಹೊಂದಿದೆ. ಇದು ವಿಶ್ವ ಮಾನವತೆಯ ಮಂತ್ರ, ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅಸಮಾನತೆ ಈ ಜಗದಲ್ಲಿರಲು ಸಾಧ್ಯವಿಲ್ಲ ಎಂದು ಪತ್ರಕರ್ತ, ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ತಿಳಿಸಿದರು.
ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಸಜೀಪಮುನ್ನೂರು ಗ್ರಾಮದ ಹೊಸಹೊಕ್ಲುವಿನಲ್ಲಿರುವ ಯುವವಾಹಿನಿ ಸದಸ್ಯೆ ಶ್ರೇಯ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿಯ ೩೯ನೇ ಮಾಲಿಕೆಯಲ್ಲಿ ಅವರು ಗುರುಸಂದೇಶ ನೀಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಸರಳತೆಯನ್ನು ಮೈಗೂಡಿಸಿಕೊಂಡು ಆಡಂಬರವನ್ನು ವಿರೋಧಿಸಿದವರು. ನಮ್ಮ ನಿತ್ಯ ಬದುಕು, ಮದುವೆ, ಧಾರ್ಮಿಕ ಆಚರಣೆಗಳಲ್ಲಿ ಅವರು ಸರಳತೆಯ ಸೂತ್ರವನ್ನು ನೀಡಿದ್ದರೂ ನಾವು ನಮಗರಿವಿಲ್ಲದಂತೆ ಮತ್ತೆ ಆಡಂಬರದ ಬದುಕಿನತ್ತ ಮುಖಮಾಡಿ ಬದುಕನ್ನು ಕ್ಲಿಷ್ಟಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕರ್ಕೆರಾ, ನಾಗೇಶ್ ಪೊನ್ನೋಡಿ, ಅರುಣ್ ಮಹಾಕಾಳಿಬೆಟ್ಟು, ಆರೋಗ್ಯ ನಿರ್ದೆಶಕ ಮಹೇಶ್ ಬೊಳ್ಳಾಯಿ, ಸದಸ್ಯರಾದ ವಿಘ್ನೇಶ್ ಬೊಳ್ಳಾಯಿ, ಯಶೋಧರ ಕಡಂಬಲ್ಕೆ, ಸುನಿತಾ ನಿತಿನ್, ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ,ಬ್ರೀಜೇಶ್ ಕಂಜತ್ತೂರು, ಸಚಿನ್ ಕೊಡ್ಮಾಣ್,ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ವಂದಿಸಿದರು. ಗುರು ಸಂದೇಶದ ಪೂರ್ವಭಾವಿಯಾಗಿ ಭಜನಾ ಸಂಕೀರ್ತನೆ ನಡೆಯಿತು.