
ಗುಂಡ್ಲುಪೇಟೆ(ಚಾಮರಾಜನಗರ): ಕಾರು ಹಾಗೂ ಟಿಟಿ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕೇರಳ ಮೂಲದ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ-766ರ ಬೆಂಡಗಳ್ಳಿ ಗೇಟ್ ಸಮೀಪ ಎ.1ರ ಮಂಗಳವಾರ ಬೆಳಿಗ್ಗೆ ನಡೆದಿದೆ.
ಕೇರಳ ಮೂಲದ ಶಾಷಿದ್ (30), ಮುಷ್ಕಾನ್ (19) ಮೃತಪಟ್ಟವರು.
ಶಾಜೀಯಾ ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಟಿಟಿ ವಾಹನ ಚಾಲಕ ನಂಜನಗೂಡಿನ ನಗರ್ಲೆ ಗ್ರಾಮದ ಸಾಗರ್ (32) ಎಂಬವರ ಕಾಲು ಮುರಿದಿದೆ. ಘಟನೆಯಲ್ಲಿ ಉಳಿದ 8-10 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ನಂಜನಗೂಡಿನಿಂದ ಊಟಿಗೆ ತೆರಳುತ್ತಿದ್ದ ಟಿಟಿ ವಾಹನ ಹಾಗೂ ಮೈಸೂರು ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿ ಕೇರಳ ಮೂಲದ ಒಂದೇ ಕುಟುಂಬದ 8 ಮಂದಿ ಮಕ್ಕಳೊಡನೆ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದ್ದು, ಇದರಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಟಿಟಿಯಲ್ಲಿ ತೆರಳುತ್ತಿದ್ದ ಚಾಲಕ ಸೇರಿ ಸುಮಾರು 5-6 ಮಂದಿಗೂ ಗಾಯಗಳಾಗಿದೆ ಎನ್ನಲಾಗುತ್ತಿದೆ.
ಅಪಘಾತ ನಡೆದ ಕೂಡಲೇ ಬೇಗೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹ ಹಾಗೂ ಗಾಯಾಳುಗಳನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಇದರಲ್ಲಿ ಶಾಷಿದ್ ಸ್ಥಳದಲ್ಲೇ ಮೃತಪಟ್ಟಿದ್ದು, ಮುಷ್ಕಾನ್ ಎಂಬ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಬೇಗೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಂತರ ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುವ ಬೇಗೂರು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.