ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಪ್ರಕಾಶ್ ತೂಮಿನಾಡು ಈಗ ಕರುನಾಡೇ ಕೊಂಡಾಡುವ ಅದ್ಭುತ ಕಲಾವಿದ – ಕಹಳೆ ನ್ಯೂಸ್

ಅವರು ರಿಕ್ಷಾ ಡ್ರೈವರ್ ಆಗಿ ತಮ್ಮ ಜೀವನದ ರಥ ಸಾರಥಿಯನ್ನು ಸಾಗಿಸುತ್ತಿದ್ದವರು. ಜೊತೆಗೆ ಫ್ಲೈವುಡ್ ಫ್ಯಾಕ್ಟರಿಯಲ್ಲಿ, ಫರ್ನೀಚರ್ ಅಂಗಡಿಯಲ್ಲಿ ಹಾಗೂ ಗಾರೆ ಕೆಲಸ ಜೊತೆಗೆ ಸಾಕಷ್ಟು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದವರು. ಆದ್ರೆ ಈಗ ಕರ್ನಾಟಕವೇ ಹೆಮ್ಮೆ ಪಡುವಂತಹ ಕೊಂಡಾಡುವಂತಹ ಖ್ಯಾತ ಕಲಾವಿದ. ಅವರೇ ಪ್ರಕಾಶ್ ತೂಮಿನಾಡು ಎಂಬ ಅದ್ಭುತ ಕಲಾವಿದ.
ಹೌದು. ಪ್ರಕಾಶ್ ತೂಮಿನಾಡು ಅವರು ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ಪೋಷಕ ಹಾಗೂ ಹಾಸ್ಯ ನಟ. ಹುಟ್ಟಿದ್ದು ಮಂಜೇಶ್ವರದಲ್ಲಿ. ಕೇರಳ ಕರ್ನಾಟಕ ಗಡಿ ಭಾಗವಾಗಿರುವ ಮಂಜೇಶ್ವರದ ತೂಮಿನಾಡು ಇವರ ಹುಟ್ಟೂರು. ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಪ್ರಕಾಶ್ ತೂಮಿನಾಡು ಅವರಿಗೆ ನಟನೆ ಎಂದರೆ ಅಪಾರ ಆಸಕ್ತಿ. ಮೊದಲು ರಂಗಭೂಮಿ ಕಲಾವಿದರಾಗಿ ಪ್ರಸಿದ್ಧ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಕಲಾವಿದ. ಇವರ ನಟನೆಗೆ ತುಳುವ ಸೌರಭ ಎಂಬ ಬಿರುದು ಕೂಡಾ ಸಿಕ್ಕಿದೆ.
ಬಳಿಕ ತುಳು ಹಾಗೂ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಬಳಿಕ ಸಿನಿಮಾ ರಂಗದಲ್ಲಿ ಮಿಂಚುವಂತೆ ಮಾಡಿದ್ದು ಒಂದು ಮೊಟ್ಟೆಯ ಕಥೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ. ಸ್ಯಾಂಡಲ್‍ವುಡ್‍ನ ಖ್ಯಾತ ನಟರಾದ ರಿಷಭ್ ಶೆಟ್ಟಿ, ಹಾಗೂ ರಾಜ್ ಬಿ. ಶೆಟ್ಟಿ ಅವರ ಜೊತೆಗೆ ಸಿನಿಮಾ ಜರ್ನಿ ಆರಂಭಿಸಿದ ಇವರು ಬಳಿಕದ ದಿನಗಳಲ್ಲಿ ಖ್ಯಾತ ಕಲಾವಿದರಾಗಿ ಗುರುತಿಸಿಕೊಳ್ಳುತ್ತಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಎಂಬ ಕನ್ನಡ ಸಿನಿಮಾದಲ್ಲಿ ಮಾಡಿನ ನಟನೆಗೆ ಸೈಮಾ ಪ್ರಶಸ್ತಿ ಕೂಡಾ ಲಭಿಸಿದೆ.
ಇನ್ನು ಪ್ರಕಾಶ್ ತೂಮಿನಾಡು ಅವರು, ಕನ್ನಡದ ‘ಕಥೆಯೊಂದು ಶುರುವಾಗಿದೆ’, ‘ಗರುಡ ಗಮನ ವೃಷಭ ವಾಹನ’, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಯುವರತ್ನ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗೆ ಕವಚ, ಭಜರಂಗಿ-2, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಗಾಳಿಪಟ 2, ರಿಷಭ್ ಶೆಟ್ಟಿಯವರ ಕಾಂತಾರಾ ಹಾಗೂ ತುಳುವಿನ 2 ಎಕ್ರೆ ಸೇರಿದಂತೆ ಹಲವಾರು ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ನಟಿಸಿ ಅದ್ಭುತ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಕಾಂತಾರದಲ್ಲಿ ಮಾಡಿದ ಇವರ ರಾಂಪಾ ಪಾತ್ರಕ್ಕೆ 2023ರಲ್ಲಿ ಸೈಮಾ ಅವಾರ್ಡ್ ಕೂಆ ಲಭಿಸಿದೆ. ಸಿನಿಮಾಕ್ಕೆ ಇವರ ಡೆಡಿಕೇಶನ್ ಎಷ್ಟರ ಮಟ್ಟಿದೆ ಇದೆ ಎಂದರೆ ಕಾಂತಾರ ಸಿನಿಮಕ್ಕಾಗಿ ಸಿಕ್ಕ 12 ಚಿತ್ರಗಳನ್ನು ತಿರಸ್ಕರಿಸಿದ್ದಾರೆ. ಇನ್ನು ಕೇವಲ ರಂಗಣೂಮಿ, ಸಿನಿಮಾ ಮಾತ್ರವಲ್ಲದೇ ಟಿವಿ ರಿಯಾಲಿಟಿ ಶೋಗಳಲ್ಲೂ ನಟಿಸಿ ತಮ್ಮದೇ ಆದ ಅಭಿಮಾನ ಬಳಗವನ್ನು ಪಡೆದುಕೊಂಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ರಿಯಾಲಿಟಿ ಶೋನಲ್ಲೂ ನಟಿಸಿದ್ದು ಕರ್ನಾಟಕದ ಮನೆ ಮಾತಾಗಿದ್ದಾರೆ. ಇವರ ಈ ಕಲೆಗೆ ಸಾಕಷ್ಟು ಕಡೆಗಳಲ್ಲಿ ಸನ್ಮಾನ ಪುರಸ್ಕಾರಗಳು ಕೂಡಾ ಲಭಿಸಿದೆ.
ಅದೇನೆ ಆಗ್ಲಿ ಸಿನಿರಂಗದಲ್ಲಿ ಹೆಸರು ಮಾಡುತ್ತಿರುವ ಪ್ರಕಾಶ್ ತೂಮಿನಾಡು ಅವರ ಕಲಾ ಜರ್ನಿ ಹೀಗೆ ಮುಂದುವರಿದು ದೇಶಾದ್ಯಂತ ಹೆಸರು ಮಾಡಲಿ ಅವರ ಕಲೆಗೆ ಕಲಾಮಾತೆ ಶಾರದೆಯ ಅನುಗ್ರಹ ಸದಾ ಇರಲಿ ಎಂಬ ಹಾರೈಕೆ ನಮ್ಮದು.