ವೈದ್ಯೆಯಾಗಿ ಜನರ ಸೇವೆ ಮಾಡೋದ್ರಲ್ಲೂ ಸೈ, ನಟನೆಯಲ್ಲಿ ಎತ್ತಿದ ಕೈ ಡಾ. ರೂಪಶ್ರೀ ಗುರುನಾಥ್ ಮುನ್ನೋಳಿ..!! – ಕಹಳೆ ನ್ಯೂಸ್

ಆಕೆಗೆ ಚಿಕ್ಕ ವಯಸ್ಸಿನಲ್ಲೇ ವೈದ್ಯೆಯಾಗಬೇಕೆಂಬ ಕನಸು. ಕ್ಲಾಸ್‌ನಲ್ಲೂ ಟಾಪರ್ ಆಗಿದ್ದ ಈಕೆಗೆ ಸಂಗೀತದಲ್ಲೂ ಅಪಾರ ಆಸಕ್ತಿ. ಅಷ್ಟೇ ಅಲ್ಲ ದೊಡ್ಡ ಪರದೆಯಲ್ಲಿ ಬರುವುದು ಆಕೆಯ ಮತ್ತೊಂದು ಕನಸು. ಕೊನೆಗೂ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾರೆ ರೂಪಶ್ರೀ ಗುರುನಾಥ್ ಮುನ್ನೋಳಿ.
ಹೌದು. ಮನಸ್ಸೊಂದಿದ್ದರೆ ಮಾರ್ಗ ಎಂಬಂತೆ ಕಂಡ ಕನಸಿಗಾಗಿ ಹಾತೊರೆದು ಕೊನೆಗೂ ಕನಸು ನನಸಾಗಿಸಕೊಂಡ ವೈದ್ಯೆಯ ಕಥೆಯಿದು. ಹುಟ್ಟಿದ್ದು, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪಶ್ಚಿಮ ಕಲ್ವಿಯಲ್ಲಿ. ಶಿಕ್ಷಕಿ ಗಿರಿಜಮ್ಮ ಹಾಗೂ ಗುರುನಾಥ್ ಮುನ್ನೋಳಿ ದಂಪತಿ ಪುತ್ರಿ. ಪ್ರಥಾಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಲಿತ ಇವರು ಪ್ರತಿ ವಿಷಯದಲ್ಲೂ ಟಾಪರ್ ಆಗಿದ್ದವರು. ೬ನೇ ತರಗತಿಯಲ್ಲಿರುವಾಗಲೇ ತನಗೆ ಆಸರೆಯಾಗಿದ್ದ ತಂದೆಯನ್ನೂ ಕಳೆದುಕೊಳ್ಳುತ್ತಾರೆ.
ಹೈಸ್ಕೂಲ್ ಶಿಕ್ಷಣವನ್ನು ಇಂಗ್ಲೀಷ್ ಮೀಡಿಯಂನಲ್ಲಿ ಕಲಿತಿದ್ದು ೯೨.೩೨ ಶೇಕಡಾ ಜೊತೆಗೆ ಕನ್ನಡದಲ್ಲಿ ೧೨೫ಕ್ಕೆ ೧೨೪ ಅಂಕ ಪಡೆದಿದ್ದಾರೆ. ಇದರ ಜೊತೆಗೆ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರೂಪಶ್ರೀ ಅವರು ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮುಗಿಸಿದ್ದಾರೆ. ಜೊತೆಗೆ ಹಾರ್ಮೋನಿಯಂ ನುಡಿಸುವಲ್ಲಿಯೂ ಪರಿಣಿತರು. ಬಳಿಕ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಕಲಿತಿದ್ದು, ಪಿಯುಸಿಯಲ್ಲೂ ಭೌತಶಾಸ್ತ್ರದಲ್ಲಿ ೧೦೦ಕ್ಕೆ ನೂರು ಅಂಕ ಪಡೆಯುವುದರ ಮೂಲಕ ಶೇ ೯೫ ರಷ್ಟು ಉತ್ತೀರ್ಣರಾಗಿದ್ದಾರೆ.
ಸಣ್ಣ ವಯಸ್ಸಿನಲ್ಲೇ ವೈದ್ಯೆಯಾಗಬೇಕೆಂಬ ಕನಸು ಹೊಂದಿದ್ದ ರೂಪಶ್ರೀ ಬೀದರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಸರ್ಕಾರಿ ಸೀಟು ಪಡೆಯುವ ಮೂಲಕ ವೈದ್ಯೆಯಾದರು. ಇನ್ನು ಎಲ್ಲರ ಜೀವನದಲ್ಲಿ ನಡೆಯುವಂತೆ ರೂಪಶ್ರೀ ಅವರು ಕೂಡಾ ಲವ್ ಬ್ರೇಕ್ ಅಪ್‌ನಿಂದಾಗಿ ಖಿನ್ನತೆಗೆ ಒಳಗಾಗಿದ್ದರು. ಬಹಳಷ್ಟು ಕಷ್ಟಗಳ ನಡುವೆಯೂ ಎಂಬಿಬಿಎಸ್‌ನಲ್ಲಿ ವಿಫಲರಾಗಲಿಲ್ಲ.
ಇನ್ನು ನಟನೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದ ರೂಪಶ್ರೀ ಅವರು ಕೊರೊನಾ ಸಂದರ್ಭದಲ್ಲಿ ಮಾಡೆಲಿಂಗ್‌ಗೆ ಆಯ್ಕೆಯಾದರು. ಅಂತಿಮ ಸುತ್ತಿಗೂ ಸೆಲೆಕ್ಟ್ ಆಗಿದ್ದವರು. ಇದಕ್ಕೆ ಇವರ ತಾಯಿ ಅವಕಾಶ ನೀಡದೇ ಎಂಬಿಬಿಎಸ್ ಪೂರ್ಣಗೊಳಿಸಲು ಒತ್ತಾಯಿಸಿದ್ದಾರೆ. ಬಳಿಕ ರೂಪಶ್ರೀ ಅವರು ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ನಂತರ ಪಿಎಚ್‌ಸಿ ಎಂಎಂ ವಾಡಾದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸೇರಿಕೊಂಡು ಜನರಿಗೆ ಸೇವೆ ಸಲ್ಲಿಸಿದ್ದಾರೆ.
ನಂತರ ಬೆಂಗಳೂರಿಗೆ ನೀಟ್ ಪಿಜಿ ಕೋಚಿಂಗ್ ತೆಗೆದುಕೊಳ್ಳಲು ಹೋಗುತ್ತಾರೆ. ಇದರ ಜೊತೆಗೆ ಸಿನಿಮಾ ಹಾಗೂ ಸೀರಿಯಲ್ ಆಡಿಷನ್ ನೀಡಲು ಪ್ರಾರಂಭಿಸುತ್ತಾರೆ. ಅಂತೂ ಕರಿಮಣಿ ಧಾರಾವಾಹಿಯ ಮೂಲಕ ಕಲರ್ಸ್ ಕನ್ನಡದಲ್ಲಿ ಟಿವಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಡಾ. ಆಕಾಶ್ ಭೈರಿಕೊಪ್ಪ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ, ಇದು ಶಿವು ಭೇರ್ಗಿ ಬರೆದ ಮತ್ತು ದುರ್ಗಾ ಸಿಂಹ ನಿರ್ದೇಶಿಸಿದ ಉತ್ತರಕರ್ನಾಟಕ ಆಲ್ಬಮ್ ಹಾಡಿನ ತಲಾ ತಲಾ ಒಲಿತಾಲಾ ಆನಂದ್ ಆಡಿಯೊ. ಉತ್ತರಕರ್ನಾಟಕದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ ಮತ್ತು ಇನ್ನೊಂದು ಹಾಡನ್ನು ಅದೇ ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರೀಕರಿಸಲಾಗಿದೆ. ಶೀಘ್ರದಲ್ಲೇ ದೊಡ್ಡ ಪರದೆಯಲ್ಲಿ ಕಾಣಿಸಕೊಳ್ಳಬೇಕೆಂಬ ಆಸಕ್ತಿ ಇವರದ್ದು. ಜೊತೆಗೆ ಸ್ತ್ರೀ ರೋಗ ತಜ್ಞೆತಾಗಬೇಕೆಂಬ ದೊಡ್ಡ ಕನಸನ್ನೂ ಹೊತ್ತಿದ್ದಾರೆ.
ಅದೇನೆ ಆಗ್ಲಿ ಡಾ ರೂಪಶ್ರೀ ಅವರು ಕಂಡ ಕನಸೆಲ್ಲಾ ನನಸಾಗಿ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶದಾದ್ಯಂತ್ರಿವರ ಹೆಸರು ಅಚ್ಚೊತ್ತಲಿ. ನಟನೆಯ ಜೊತೆಗೆ ಸ್ತ್ರೀ ರೋಗ ತಜ್ಞೆಯಾಗಬೇಕೆಂಬ ಇವರ ಕನಸು ಆದಷ್ಟು ಬೇಗ ನನಸಾಗಲಿ, ಹಾಗೂ ರಾಜ್ಯದ ಒಬ್ಬ ಪ್ರಸಿದ್ಧ ನಟಿಯಾಗಿ ಮೂಡಿಬರಲಿ ಎಂಬುವುದ ನಮ್ಮ ಹಾರೈಕೆ.