
ಮಂಗಳೂರು: ಪೊಲೀಸರು ಸಮಾಜದ ಭದ್ರತೆ ಹಾಗೂ ಶಾಂತಿ ನಿರ್ಮಾಣಕ್ಕೆ ದುಡಿಯುತ್ತಾರೆ. ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಸಮಾಜದಿಂದ ಗೌರವ ಪ್ರಾಪ್ತಿಯಾಗುತ್ತದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯೆಲ್ ಹೇಳಿದರು.
ನಗರ ಪೊಲೀಸ್, ಜಿಲ್ಲಾ ಪೊಲೀಸ್ ಮತ್ತು ಕೆಎಸ್‌ಆರ್‌ಪಿ 7ನೇ ಪಡೆ ಮಂಗಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಡಿ.ಎ.ಆರ್.
ಕವಾಯತು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್ ಧ್ವಜ ಮಾರಾಟದ ಶೇ.50 ರಷ್ಟು ಹಣವನ್ನು ಕೇಂದ್ರ ನಿವೃತ್ತರ ಕ್ಷೇಮಾಭಿವೃದ್ಧಿಗೆ ಹಾಗೂ ಉಳಿದದ್ದನ್ನು ಆಯಾ ಘಟಕದ ನಿವೃತ್ತರ ಕ್ಷೇಮಾಭಿವೃದ್ಧಿಗೆ ಬಳಸುವುದಾಗಿ ತಿಳಿಸಿದರು.
ಸಿಸಿಬಿ ನಿವೃತ್ತ ಪಿಎಸ್‌ಐ ಹರೀಶ್ ಪದವಿನಂಗಡಿ ಮಾತನಾಡಿ, ಪೊಲೀಸ್ ಧ್ವಜ ಮಾರಾಟ ಮಾಡಿ ಪೊಲೀಸರ ಕ್ಷೇಮಾಭಿವೃದ್ಧಿಗೆ ನಿಧಿ ಸಂಗ್ರಹಿಸುವ ಬದಲಾಗಿ ಸಂಚಾರ ನಿಯಮ ಉಲ್ಲಂಘನೆಗೆ ಪಡೆಯುವ ದಂಡದ ಮೊತ್ತದಿಂದ ಒಂದು ಭಾಗವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ನಿವೃತ್ತ ಪೊಲೀಸರು ಮತ್ತು ಕುಟುಂಬಕ್ಕೆ ಗುಂಪು ವಿಮೆ ಸೌಲಭ್ಯ, ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
2024-25ನೇ ಸಾಲಿನಲ್ಲಿ ನಿವೃತ್ತರಾದ ಅಧಿಕಾರಿ,ಸಿಬಂದಿಯನ್ನು ಸಮ್ಮಾನಿಸ ಲಾಯಿತು. ಸಂಚಾರ ಹಾಗೂ ಅಪರಾಧ ವಿಭಾಗದ ಡಿಸಿಪಿ ರವಿಶಂಕರ್, ಪ್ರೊಬೆಷನರಿ ಎಸ್ಪಿ ಮನಿಷಾ ಇದ್ದರು. ನಗರ ಶಶಸ್ತ್ರ ಮೀಸಲು ಪಡೆಯ ಡಿಸಿಪಿ ಉಮೇಶ್ ವರದಿ ವಾಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್. ಸ್ವಾಗತಿಸಿ, ಕೆಎಸ್‌ಆರ್‌ಪಿ 7ನೇ ಪಡೆಯ ಕಮಾಂಡೆಂಟ್ ಎಸ್. ಸತ್ಯನಾರಾಯಣ ವಂದಿಸಿದರು. ವಿವೇಕ್, ಗಜೇಂದ್ರ, ತಿಲಕ್‌ರಾಜ್ ನಿರೂಪಿಸಿದರು.
ಉಡುಪಿ: ಪೊಲೀಸ್ ಧ್ವಜ ದಿನಾಚರಣೆ
ಉಡುಪಿ: ನಿವೃತ್ತ ಪೊಲೀಸರಿಗೆ ಪೊಲೀಸ್ ಕ್ಯಾಂಟಿನ್‌ನಲ್ಲಿ ಔಷಧ ಕೊಡುವ ವ್ಯವಸ್ಥೆ ಜಾರಿಗೆ ತರಬೇಕು. ಪೊಲೀಸರು ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆ ಮೆರೆಯಬೇಕು ಎಂದು ಉಡುಪಿ ಜಿಲ್ಲಾ ನಿವೃತ್ತ ಡಿ.ಎಸ್.ಪಿ. ರವಿ ನಾಯ್ಕ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಆಯೋಜಿಸಲಾದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಿ.ಎ.ಹೆಗಡೆ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ, ಕಾರ್ಕಳದ ಡಿಎಫ್‌ಓ ಶಿವರಾಮ್ ಬಾಬು ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಕೆ.ಅರುಣ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ.ಸಿದ್ದಲಿಂಗಪ್ಪ ವಂದಿಸಿದರು. ಸಿಬಂದಿ ಯೋಗೀಶ್ ನಿರೂಪಿಸಿದರು. ಪೊಲೀಸರಿಂದ ಆಕರ್ಷಕ ಕವಾಯತು ನಡೆಯಿತು.