
ಬಂಟ್ವಾಳ: ಕಲ್ಲಡ್ಕ ಪೇಟೆಯ ಕೊಳಚೆ ನೀರು ನೇರವಾಗಿ ತೆರೆದ ಚರಂಡಿಯಲ್ಲಿ ಹರಿದು ಶುದ್ಧ ನೀರಿನ ತೋಡು ಸೇರುತ್ತಿರುವ ಪರಿಣಾಮ ಸ್ಥಳೀಯ ನಿವಾಸಿಗಳಿಗೆ ದುರ್ನಾತ, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿರುವ ಕುರಿತು ನಾಗರಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇದರಿಂದ ಸ್ಥಳೀಯ ಕೃಷಿ ಭೂಮಿಗಳಿಗೆ ತೊಂದರೆಯಾಗುತ್ತಿದ್ದು, ಸಮಸ್ಯೆಯನ್ನು ಪರಿಹರಿಸುವಂತೆ ಸಂಬಂಧಪಟ್ಟ ಎಲ್ಲರಿಗೂ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಲ್ಲಡ್ಕ ಪೇಟೆಯ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯಲ್ಲಿ ಮಳೆ ನೀರು ಹಾಗೂ ಕೊಳಚೆ ನೀರು ಹರಿಯುವುದಕ್ಕೆ ಪ್ರತ್ಯೇಕ ವ್ಯವಸ್ಥೆಗಳಿದ್ದು, ಆದರೆ ಪ್ರಸ್ತುತ ಕೊಳಚೆ ನೀರು ಹರಿಯುವ ಒಳಚರಂಡಿ ವ್ಯವಸ್ಥೆ ಕೆಟ್ಟು ಹೋಗಿರುವ ಪರಿಣಾಮ ಕಲ್ಲಡ್ಕದ ಮಾಂಸದಂಗಡಿ, ಹೊಟೇಲ್‌ನವರು ನೀರನ್ನು ನೇರವಾಗಿ ತೆರೆದ ಚರಂಡಿಗೆ ಬಿಡುತ್ತಿದ್ದಾರೆ. ಒಳಚರಂಡಿಯ ಮೂಲಕವೂ ಹರಿದು ಬಂದ ನೀರು ಶುದ್ಧೀಕರಣಗೊಳ್ಳದೆ ತೋಡು ಸೇರುತ್ತಿರುವುದರಿಂದ ಮೂಗು ಬಿಡದ ಸ್ಥಿತಿ ಸ್ಥಳೀಯರದ್ದಾಗಿದೆ.
ಹದಗೆಟ್ಟ ಒಳಚರಂಡಿ ವ್ಯವಸ್ಥೆ
ಕಲ್ಲಡ್ಕ ಪೇಟೆಯಲ್ಲಿ ಕೊಳಚೆ ನೀರು ಹರಿಯಲು ಪೈಪುಗಳನ್ನು ಅಳವಡಿಸಿ ಒಳಚರಂಡಿ ಮಾಡಲಾಗಿದ್ದು, ವಿಟ್ಲ ರಸ್ತೆಯ ಬಳಿ 2014-15ನೇ ಸಾಲಿನಲ್ಲಿ ದ್ರವ ತ್ಯಾಜ್ಯ ವಿಲೇವಾರಿ ಘಟಕವನ್ನೂ ಮಾಡಲಾಗಿತ್ತು. ಹುಡಿಯೊಂದನ್ನು ಬಳಸಿ ಸುಮಾರು 4 ಹಂತಗಳಲ್ಲಿ ನೀರನ್ನು ಶುದ್ಧೀಕರಣ ನಡೆಯುತ್ತಿತ್ತು. ಬಳಿಕ ಸುಮಾರು ಒಂದೂವರೆ ಕಿ.ಮೀ. ಉದ್ದಕ್ಕೆ ಮತ್ತೆ ಪೈಪು ಹಾಕಿ ತೋಡಿಗೆ ಬಿಡಲಾಗುತ್ತಿತ್ತು.
ಈಗ ಪೇಟೆ ವಿಸ್ತರಣೆ ಆಗಿದ್ದರಿಂದ ಘಟಕದ ಸಾಮರ್ಥ್ಯ ಸಾಲದಾಗಿದೆ. ಮೊದಲು ಅಂಗಡಿಯವರು ಕೇವಲ ನೀರು ಮಾತ್ರ ಬಿಡುತ್ತಿದ್ದರು. ಬಳಿಕ ಅದರ ಜತೆಗೆ ಕೊಳಿ ತ್ಯಾಜ್ಯಗಳೂ ಬಂದು 2019ರಿಂದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಲ್ಲಿ ಬ್ಲಾಕ್ ಆಗಿ ಕೊಳಚೆ ನೀರು ಹರಿಯಲು ಸಾಧ್ಯವಿಲ್ಲವಾಗಿದೆ. ಜತೆಗೆ ಗ್ರಾ.ಪಂ. ನೀರು ಶುದ್ಧೀಕರಿಸುವ ಹುಡಿಯ ಬಳಕೆಯನ್ನೂ ನಿಲ್ಲಿಸಿದೆ. ಹೀಗಾಗಿ ಸ್ಥಳೀಯ ವರ್ತಕರು ಕೊಳಚೆ ನೀರನ್ನು ನೇರವಾಗಿ ಮಳೆ ನೀರು ಹರಿಯುವ ತೆರೆದ ಚರಂಡಿಗೆ ಬಿಡುತ್ತಿದ್ದಾರೆ.
ಮಣ್ಣು ಹಾಕಿ ಮುಚ್ಚುವುದಾಗಿ ಆಕ್ರೋಶ
ಕಲ್ಲಡ್ಕ ಪೇಟೆಯಲ್ಲಿ ತೆರೆದ ಚರಂಡಿಯಲ್ಲೇ ಕೊಳಚೆ ನೀರು ಹರಿಯುವುದನ್ನು ನಿಲ್ಲಿಸಬೇಕು ಎಂದು ಸ್ಥಳೀಯ ಕೆಲವೊಂದು ನಾಗರಿಕರು ಪ್ರಧಾನಮಂತ್ರಿಗಳ ಪಿಜಿ ಪೋರ್ಟಲ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗ್ರಾ.ಪಂ., ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿ ವರ್ಗಕ್ಕೆ ದೂರು ನೀಡಿದ್ದು, ಅಲ್ಲಿಂದ ದುರಸ್ತಿಯ ಭರವಸೆಗಳು ಬರುತ್ತದೆಯೇ ವಿನಃ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಗ್ರಾಮಸಭೆಯಲ್ಲೂ ಚರ್ಚೆಗೆ ಸೀಮಿತವಾಗಿದೆ. ಕೆಲವು ದಿನಗಳ ಹಿಂದೆ ಒಂದಷ್ಟು ನಾಗರಿಕರು ಗ್ರಾ.ಪಂ.ಗೆ ಭೇಟಿ ನೀಡಿ ಮಾ. 31ರೊಳಗೆ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಮಳೆ ನೀರು ಹರಿಯುವ ತೆರೆದ ಚರಂಡಿಗೆ ಮಣ್ಣು ಹಾಕಿ ಪ್ರತಿಭಟನೆ ನಡೆಸಲಿದ್ದೇವೆ ಎಂಬ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ತೋಡಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗ್ರಾ.ಪಂ.ಕೂಡ ಕೊಂಚ ಉತ್ಸುಕತೆ ತೋರಿದ್ದು, ಸೋಮವಾರ ನೀರು ಶುದ್ಧೀಕರಿಸುವ ಹುಡಿಯನ್ನು ಪೂರೈಕೆ ಮಾಡುವ ಸಂಸ್ಥೆಯ ಅಧಿಕಾರಿಯೊಬ್ಬರು ಕಲ್ಲಡ್ಕಕ್ಕೆ ಭೇಟಿ ನೀಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ, ಗ್ರಾ.ಪಂ.ಸದಸ್ಯರ ಜತೆ ಕೊಳಚೆ ನೀರು ಹರಿಯುವುದನ್ನು ಪರಿಶೀಲನೆ ಮಾಡಿ ತೆರಳಿದ್ದಾರೆ.
ತೋಡಿಗೆ ಕಟ್ಟ ಹಾಕದ ಸ್ಥಿತಿ ಬಂದಿದೆ
ಕಲ್ಲಡ್ಕ ಪೇಟೆಯಿಂದ ಕೊಳಚೆ ನೀರು ಗೋಳ್ತಮಜಲು ಗ್ರಾಮದ ಮಡ್ಲಮಜಲು, ಕೊಳಕೀರು ಮೂಲಕ ಹರಿದು ಬೃಹತ್ ತೋಡನ್ನು ಸೇರುತ್ತದೆ. ಹಿಂದೆ ಕೊಳಕೀರು ಭಾಗದಲ್ಲಿ ಹರಿಯುವ ಬೃಹತ್ ತೋಡಿನ ನೀರಿಗೆ ಕಟ್ಟವನ್ನು ಹಾಕಿ ಭತ್ತದ ಗದ್ದೆಗೆ ನೀರು ಹಾಯಿಸಿ ಕೃಷಿ ಕಾರ್ಯ ಮಾಡುತ್ತಿದ್ದರು. ಆದರೆ ಈಗ ಕಟ್ಟ ಹಾಕಿದರೆ ಬರೀ ಕೊಳಚೆ ನೀರು ನಿಲ್ಲುವ ಸ್ಥಿತಿ ಇದೆ. ಪ್ರಸ್ತುತ ಕೊಳಕೀರುನಲ್ಲಿ ಸಣ್ಣ ಕಿಂಡಿ ಅಣೆಕಟ್ಟು ಇದ್ದರೂ ಅದಕ್ಕೆ ಹಲಗೆ ಅಳವಡಿಸದಂತಹ ಸ್ಥಿತಿ ಇದೆ. ಹೀಗಾಗಿ ಕೃಷಿ ಕಾರ್ಯಕ್ಕೂ ತೊಂದರೆಯಾಗಿದೆ ಎಂದು ಸ್ಥಳೀಯ ಕೃಷಿಕರು ಅಭಿಪ್ರಾಯಿಸುತ್ತಾರೆ.
ವರ್ತಕರೇ ಎಸ್‌ಒಪಿ ಮಾಡಲು ನೋಟಿಸ್
ಹಾಲಿ ಹದಗೆಟ್ಟಿರುವ ಚರಂಡಿ ವ್ಯವಸ್ಥೆ ಹಾಗೂ ವಿಲೇವಾರಿ ಘಟಕವನ್ನು ಮರು ನಿರ್ಮಾಣ ಮಾಡಿದರೆ ಸಮಸ್ಯೆಗೆ ಕೊಂಚ ಪರಿಹಾರ ಸಿಗಬಹುದಾದರೂ ಎಲ್ಲರ ಸಹಕಾರ ಬೇಕಾಗುತ್ತದೆ. ಕೊಳಚೆ ನೀರು ಬಿಡುತ್ತಿರುವ ವರ್ತಕರ ಅಸಹಕಾರದ ಕಾರಣದಿಂದ ಅದರ ಕುರಿತು ಪ್ರತ್ಯೇಕ ಸಭೆ ನಡೆಸಿ ವರ್ತಕರೇ ಎಸ್‌ಒಪಿ ಮಾಡಿ ಶುದ್ಧ ನೀರನ್ನು ತೋಡಿಗೆ ಬಿಡುವಂತೆ ನೋಟಿಸ್ ನೀಡಲಾಗಿದೆ. ಜತೆಗೆ ತಮಿಳುನಾಡಿನ ಪರಿಣಿತ ಒಳಚರಂಡಿ ವ್ಯವಸ್ಥೆಯ ಗುತ್ತಿಗೆದಾರರನ್ನು ಕರೆಸಿ ಪೇಟೆಯ ವ್ಯವಸ್ಥೆಯನ್ನು ತೋರಿಸಲಾಗಿದ್ದು, ಅವರು 1 ಕೋ.ರೂ.ಗಳ ಅಂದಾಜು ಮೊತ್ತ ಹೇಳಿದ್ದು, ಗ್ರಾ.ಪಂ.ಗೆ ಅದು ಅಸಾಧ್ಯವಾದ ಕಾರಣ ಸಂಬಂಧಪಟ್ಟವರಿಗೆಪತ್ರಬರೆಯಲಾಗಿದೆ.