Recent Posts

Sunday, January 19, 2025
ಸುದ್ದಿ

ನಾಗರಿಕ ಸೇವಾ ಪರೀಕ್ಷೆಗಳ ತರಬೇತಿ ಕೇಂದ್ರ ಯಶಸ್‌ಗೆ ಅರ್ಜಿ ಆಹ್ವಾನ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ನಾಗರಿಕ ಸೇವಾ ಪರೀಕ್ಷೆಗಳ ಬಗೆಗಿನ ಉಚಿತ ತರಬೇತಿ ಕೇಂದ್ರ ಯಶಸ್ ಇದರ ಈ ಬಾರಿಯ ಆಯ್ಕೆ ಪ್ರಕ್ರಿಯೆಯ ಮೊದಲ ಹಂತದ ಪರೀಕ್ಷೆ ಡಿ.25 ರಂದು ನಡೆಯಲಿದೆ. ಅದಕ್ಕೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಂಬತ್ತನೆಯ ತರಗತಿಯಲ್ಲಿ ಕನಿಷ್ಟ ಅರವತ್ತು ಶೇಕಡಾ ಗಳಿಸಿ ಪ್ರಸ್ತುತ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪರೀಕ್ಷೆಗಳು ನಾಗರಿಕ ಸೇವಾ ಪರೀಕ್ಷಾ ಮಾದರಿಯಲ್ಲೇ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ಮೂರು ಹಂತವನ್ನು ತೇರ್ಗಡೆಗೊಳಿಸಿದರೆ ಮಾತ್ರ ಈ ಸಂಸ್ಥೆಗೆ ದಾಖಲಾಗಲಿದ್ದಾರೆ. ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಿ ಅತ್ಯುತ್ತಮ ಇನ್ನೂರು ಮಂದಿಯನ್ನು ಎರಡನೆಯ ಹಂತದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ಐವತ್ತು ವಿದ್ಯಾಥಿಗಳನ್ನು ಮೂರನೆಯ ಹಂತಕ್ಕೆ ಆಯ್ಕೆ ಮಾಡಿ ಅಂತಿಮವಾಗಿ ಇಪ್ಪತ್ತೈದು ವಿದ್ಯಾಥಿಗಳನ್ನು ಸಂದರ್ಶನದ ಆಧಾರದ ಮೇಲೆ ಸಂಸ್ಥೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತಿಮ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನಾಗರಿಕ ಸೇವಾ ಕ್ಷೇತ್ರಗಳಾದ ಐಎಎಸ್, ಐಪಿಎಸ್ ಮೊದಲಾದವುಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ತರಬೇತಿ ನೀಡುತ್ತಿದೆ. ಅಂತಿಮವಾಗಿ ಆಯ್ಕೆಯಾಗುವ ಇಪ್ಪತ್ತೈದು ಮಂದಿ ವಿವೇಕಾನಂದ ಸಂಸ್ಥೆಯಲ್ಲಿ ತಮ್ಮ ಪಾರಂಪರಿಕ ಪಿ.ಯು, ಪದವಿ ಮೊದಲಾದ ಶಿಕ್ಷಣದೊಂದಿಗೆ ಯಶಸ್ ತರಬೇತಿಯನ್ನು ಪಡೆಯಲಿದ್ದಾರೆ. ಪ್ರತಿನಿತ್ಯ ಯಶಸ್ ತರಬೇತಿ ನಡೆಯಲಿದ್ದು ಅದು ಸಂಪೂರ್ಣ ಉಚಿತವಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಐಎಎಸ್, ಐಪಿಎಸ್ ಅಧಿಕಾರಿಗಳಿಂದ ತರಬೇತಿ: ಪ್ರಸಕ್ತ ಐಎಎಸ್, ಐಪಿಎಸ್, ಕೆಎಎಸ್ ಮೊದಲಾದ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರೇ ಈ ಸಂಸ್ಥೆಗೆ ಆಗಾಗ ಬಂದು ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಾರೆ. ಅಂತೆಯೇ ನಿವೃತ್ತ ಅಧಿಕಾರಿಗಳೂ ಈ ಸಂಸ್ಥೆಯ ಭಾಗವಾಗಿರುವುದು ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ಒದಗಿ ಬರುವುದಕ್ಕೆ ಅನುಕೂಲವೆನಿಸಿದೆ. ದೇಶದ ಸಂಸ್ಕೃತಿ, ನಿಜ ಇತಿಹಾಸಗಳನ್ನು ಮಾತ್ರವಲ್ಲದೆ ರಾಜಕೀಯ, ಸಾಂಸ್ಕೃತಿಕ, ವಾಣಿಜ್ಯ, ವಿಜ್ಞಾನವೇ ಮೊದಲಾದ ನಾನಾ ಸಂಗತಿಗಳ ಬಗೆಗೆ ಈ ಕೇಂದ್ರ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತದೆ. ಜತೆಗೆ ನಾಯಕತ್ವ ತರಬೇತಿ, ಸಂವಹನ ಕಾರ್ಯಾಗಾರ, ಅಣಕು ಸಂದರ್ಶನಗಳು ನಿರಂತರವಾಗಿ ನಡೆಯುತ್ತವೆ.

ಪ್ರತಿವರ್ಷ ಡಿ.25 ರಂದು ನಡೆಯುವ ಈ ಪರೀಕ್ಷೆ ಪ್ರಸ್ತುತ ವರ್ಷ ಪುತ್ತೂರಿನ ವಿವೇಕಾನಂದ ಪಿ.ಯು.ಕಾಲೇಜು, ಕಲ್ಲಡ್ಕದ ಶ್ರೀರಾಮ ಪದವಿಪೂರ್ವ ಕಾಲೇಜು, ಕಾಸರಗೋಡಿನ ಪೆರ್ಲದ ನಾಲಂದ ಕಾಲೇಜ್ ಆಫ್ ಸೈನ್ಸ್, ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜು, ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಸುಳ್ಯದ ಶಾರದಾ ಹೆಣ್ಣುಮಕ್ಕಳ ಪ್ರೌಢಶಾಲೆ, ಕಡಬದ ಸರಸ್ವತಿ ವಿದ್ಯಾಕೇಂದ್ರ, ಮಣಿಪಾಲದ ಎಂ.ಐ.ಟಿ ಹಾಗೂ ಬೆಳ್ತಂಗಡಿಯ ವಾಣಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಬೆಳಗ್ಗೆ ಹತ್ತರಿಂದ ಮಧ್ಯಾಹ್ನ ಹನ್ನೆರಡೂವರೆಯ ವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಈ ಮೇಲಿನ ಯಾವುದೇ ಕೇಂದ್ರದಲ್ಲೂ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಇರುತ್ತದೆ.

ಶಿಕ್ಷಣದಿಂದ ಸುಸಂಸ್ಕೃತ, ಸಜ್ಜನ ವ್ಯಕ್ತಿ ನಿರ್ಮಾಣವಾಗಬೇಕು ಎಂಬ ಧ್ಯೇಯದಿಂದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿದೆ. ಇದರ ಆಶ್ರಯದಲ್ಲಿ ಶಿಶುಮಂದಿರದಿಂದ ತೊಡಗಿ ಇಂಜಿನಿಯರಿಂಗ್ ಕಾಲೇಜಿನ ತನಕ ಒಟ್ಟು 63 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ ಮತ್ತು ರಾಜ್ಯದ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು ನಿಂತಿದೆ. ವಿವೇಕಾನಂದ ವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಜೊತೆಗೆ ದೇಸೀಯ ಸಂಸ್ಕೃತಿ, ವಿಚಾರಗಳನ್ನು ನೀಡುತ್ತಾ ಸಮಾಜದ ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸುತ್ತಿದೆ.

ಈ ದೇಶದ ಸಂಸ್ಕೃತಿ, ವಿಚಾರಗಳನ್ನು ತಿಳಿದಿರುವ, ಸಮಾಜದ ದುರ್ಬಲರ ಕಷ್ಟಗಳಿಗೆ ಸ್ಪಂದಿಸುವ, ಭ್ರಷ್ಟಾಚಾರರಹಿತ, ಪ್ರಾಮಾಣಿಕ ಅಧಿಕಾರಿಗಳ ಅಗತ್ಯ ದೇಶಕ್ಕಿದೆ. ಅಂತಹ ಅಧಿಕಾರಿಗಳು ಸರಕಾರದ ವಿವಿಧ ಕ್ಷೇತ್ರಗಳಲ್ಲಿದ್ದರೆ ನಮ್ಮ ದೇಶದಲ್ಲಿ ಉತ್ತಮ ಆಡಳಿತವಿರಲು ಸಾಧ್ಯ. ಈ ಹಿನ್ನಲೆಯಲ್ಲಿ ಗ್ರಾಮಾಂತರದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕ ಸೇವಾ ಕ್ಷೇತ್ರಗಳಲ್ಲಿ ಅರ್ಹತೆ ಗಳಿಸುವಂತಾಗಬೇಕು ಎಂಬ ಉದ್ದೇಶದಿಂದ ಪದವಿಪೂರ್ವ ಮಟ್ಟದಿಂದಲೇ ನಾಗರಿಕ ಸೇವೆಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತದೆ. ಈಗಾಗಲೇ ನಾಲ್ಕು ತಂಡಗಳು ‘ಯಶಸ್’ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅರ್ಜಿ ಸಲ್ಲಿಸುವ ವಿಧಾನ : ಯಶಸ್ ತರಬೇತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು yashas.vivekanandaedu.org ನಿಂದ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಸಂಬಂಧಿತ ಶಾಲೆಯ ಮುಖ್ಯ ಶಿಕ್ಷಕರ ಸಹಿಯೊಂದಿಗೆ ಯಶಸ್ ಕಛೇರಿಗೆ ತಲುಪುವಂತೆ ಕಳುಹಿಸಬೇಕು. ತಮ್ಮ ಸಂಸ್ಥೆಯಲ್ಲಿ ಇಂಟರ್‌ನೆಟ್ ಅವಕಾಶ ಇದ್ದಲ್ಲಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಡಿಸೆಂಬರ್ 10, 2018.

ಪರೀಕ್ಷಾ ವಿಧಾನ : ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ 2.30 ಗಂಟೆ ಕಾಲಾವಧಿಯ ಒಂದು ಅಂಕದ 180 ಪ್ರಶ್ನೆಗಳು ಹಾಗೂ ೨೦ ಅಂಕಗಳ ಪ್ರಬಂಧ ಪ್ರಶ್ನೆಗಳನ್ನೊಳಗೊಂಡ ಪ್ರವೇಶ ಪರೀಕ್ಷೆ ಇರುತ್ತದೆ. ಪ್ರವೇಶ ಪರೀಕ್ಷೆಯಲ್ಲಿ 8, 9, 10 ನೇ ತರಗತಿಯ ಸಾಮಾನ್ಯ ಜ್ಞಾನ ಗಣಿತ, ಇತಿಹಾಸ, ರಾಜಕೀಯ, ವಿಜ್ಞಾನ, ಕನ್ನಡ ಭಾಷೆ-ಸಾಹಿತ್ಯ, ಇಂಗ್ಲೀಷ್, ವ್ಯಾಕರಣ, ಕ್ರೀಡಾ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ ಮತ್ತು ಪ್ರಶ್ನೆಗಳು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಇರುತ್ತವೆ. ಹೆಚ್ಚಿನ ಮಾಹಿತಿಗೆ : 08251 298599, 9483925308