Friday, September 20, 2024
ಸುದ್ದಿ

ಚಾರಣ ಅವಿಸ್ಮರಣೀಯ ಅನುಭವಗಳನ್ನು ಕಟ್ಟಿಕೊಡುತ್ತದೆ: ಮಹದೇವ ಶಾಸ್ತ್ರಿ – ಕಹಳೆ ನ್ಯೂಸ್

ಪುತ್ತೂರು: ಚಾರಣ ಎನ್ನುವುದು ಅವಿಸ್ಮರಣೀಯ ಅನುಭವಗಳನ್ನು ಕಟ್ಟಿಕೊಡುತ್ತದೆ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಚಾರಣಗಳು ಅಪಾಯಕಾರಿಯಾಗಿರುತ್ತವೆ. ಯಾವುದೇ ಚಾರಣಗಳನ್ನು ಕೈಗೊಳ್ಳುವ ಮುನ್ನ ಸರಿಯಾದ ಪೂರ್ವ ಯೋಜನೆಯನ್ನು ತಯಾರಿಸಿಕೊಂಡಿರಬೇಕು ಎಂದು ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ, ಹವ್ಯಾಸಿ ಚಾರಣಿಗ ಮಹದೇವ ಶಾಸ್ತ್ರಿ ಮಣಿಲ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸುವ ‘ಜನ-ಮನ’ ಕಾರ್ಯಕ್ರಮದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃಷಿ ಹಾಗೂ ಚಾರಣಗಳ ಅನುಭವವನ್ನು ವಿದ್ಯಾಥಿಗಳೊಂದಿಗೆ ಹಂಚಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೃಷಿ ದೇಶದ ಪ್ರಮುಖ ಕ್ಷೇತ್ರ. ಯಾವುದೇ ಕಾರಣಕ್ಕೂ ಜಮೀನನ್ನು ಪಾಳುಬಿಡಬಾರದು. ಇಂದು ಜಮೀನನ್ನು ಉಳುವುದಕ್ಕಾಗಿ ಅನೇಕ ತಂತ್ರಜ್ಞಾನಗಳು ಬಂದಿವೆ. ಅವುಗಳನ್ನು ಬಳಸಿಕೊಂಡು ನಮಗೆ ಬೇಕಾದ ಆಹಾರವನ್ನು ನಾವೇ ಉತ್ಪಾದಿಸಬೇಕು. ಆಗ ಆರೋಗ್ಯಕರ ಆಹಾರ ಪದ್ದತಿ ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು

ಜೀವನದಲ್ಲಿ ಗುರಿಯಿರಬೇಕು. ಭವಿಷ್ಯದ ಬಗೆಗೆ ಕಂಡುಕೊಂಡ ಕನಸುಗಳನ್ನು ಸಾಧಿಸುವ ಛಲವಿದ್ದಾಗ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ. ನಿರಂತರ ಪ್ರಯತ್ನ ಹಾಗೂ ಅಭ್ಯಾಸ ಬದುಕಿನ ಭಾಗವಾಗಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಿ, ಜೀವನವನ್ನು ಪ್ರೀತಿಸಬೇಕು. ಸಮಾಜದ ಒಳಿತಿಗಾಗಿ ಒಂದಿಷ್ಟು ಸಮಯ ಮೀಸಲಾಗಿರಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮುಂದೆ ವೃತ್ತಿ ಜೀವನವನ್ನು ಆರಂಭಿಸುವ ಸಂದರ್ಭದಲ್ಲಿ ಬರವಣಿಗೆಗೆ ಬೇಕಾದ ಅನುಭವಗಳನ್ನು ಪೂರೈಸುವ ಕೆಲಸವನ್ನು ಜನ-ಮನ ಕಾರ್ಯಕ್ರಮ ಮಾಡುತ್ತಿದೆ. ನಮ್ಮ ಜೀವನದಲ್ಲಿ ಹಿಮಾಲಯದೆತ್ತರಕ್ಕೆ ಸಮಸ್ಯೆಗಳು ಎದುರಾಗಬಹುದು. ಆದರೆ ಅವುಗಳನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಯಶಸ್ಸಿನ ಶಿಖರವನ್ನು ಏರಲು ಸಾಧ್ಯ. ಜೀವನದ ಚಾರಣ ಸುಗಮವಾಗಿಲ್ಲ. ಛಲ ಪರಿಶ್ರಮವಿದ್ದಾಗ ಮಾತ್ರ ಗುರಿ ಸೇರಬಹುದು ಎಂದರು.

ಈ ಸಂದರ್ಭ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ್ ಭಟ್, ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ.ವಿಜಯ ಸರಸ್ವತಿ, ಸ್ನಾತಕೋತ್ತರ ವಾಣಿಜ್ಯ ಹಾಗೂ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಯಮ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಸುಷ್ಮಾ ಸದಾಶಿವ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕಿ ಪ್ರಜ್ಞಾ ಬಾರ್ಯ ವಂದಿಸಿದರು. ಉಪನ್ಯಾಸಕಿ ಭವ್ಯ ಪಿ.ಆರ್ ನಿಡ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.