ಆಟೋ ಚಾಲಕರಾಗಿ ಕೆಲಸಮಾಡುತ್ತಿದ್ದವರು ಇಂದು ಕರುನಾಡೇ ಮೆಚ್ಚುವ ಖ್ಯಾತ ಗಾಯಕ ಸಂದೇಶ್ ನೀರ್ ಮಾರ್ಗ – ಕಹಳೆ ನ್ಯೂಸ್

ಅವರು ರಿಕ್ಷಾ ಚಾಲಕರಾಗಿ, ಮೀನು ಮಾರಾಟಗಾರರಾಗಿ, ಫುಡ್ ಡೆಲಿವರಿ ಬಾಯ್ ಆಗಿ ಜೀವನ ಸಾಗಿಸುತ್ತಿದ್ದ ಸಾಮಾನ್ಯ ವ್ಯಕ್ತಿ. ಜೊತೆಗೆ ಚಿಕ್ಕ ವಯಸಿನಿಂದಲೆ ಭಜನಾ ಗಾಯಕರಾಗಿ ಹಾಡುತ್ತಾ ಊರಲ್ಲಿ ಗುರುತಿಸಿಕೊಂಡವರು. ಆದ್ರೆ ಈಗ ಕರುನಾಡೇ ಗುರುತಿಕೊಂಡ ಖ್ಯಾತ ಗಾಯಕರಾಗಿದ್ದಾರೆ. ಅವರೇ ಕರಾವಳಿಯ ಸಂದೇಶ್ ನೀರ್ ಮಾರ್ಗ.
ಹೌದು. ತನ್ನ ಊರು ನೀರ್ ಮಾರ್ಗದಲ್ಲಿ ಭಜನಾ ಗಾಯಕರಾಗಿದ್ದುಕೊಂಡು ಜೊತೆಗೆ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದವರು ಇಂದು ಕರುನಾಡೇ ಕೊಂಡಾಡುವAತಹ ಖ್ಯಾತ ಗಾಯಕ. ಅಂದಹಾಗೆ ಸಂದೇಶ್ ನೀರ್ ಮಾರ್ಗ ಅವರ ಹುಟ್ಟೂರು ಬೆಳ್ಳಾರೆ ಆದ್ರೆ ಬೆಳೆದಿದ್ದು ಮಾತ್ರ ನೀರ್ ಮಾರ್ಗದಲ್ಲಿ. ಇವರು ಗೋಪಾಲಕೃಷ್ಣ ಹಾಗೂ ನಳಿನಾಕ್ಷಿ ದಂಪತಿಯ ಪುತ್ರ. ಪತ್ನಿ ಮನೀಷಾ ಹಾಗೂ ಪಾಪು ಭಾರ್ಗವಿ ಹಾಗೆ ತಂಗಿ ಸಂಧ್ಯಾ ಒಳಗೊಂಡಿರುವ ಪುಟ್ಟ ಸಂಸಾರ ಇವರದ್ದು.
ಬಿಎ ಕಲಿತ ಸಂದೇಶ್ ನೀರ್‌ಮಾರ್ಗ ಅವರು ಮೊದಲಿಗೆ ಎಲೆಕ್ಟ್ರಿಶನ್ ಹೆಲ್ಪರ್ ಆಗಿದ್ದವರು. ಬಳಿಕ ಕೊರಿಯರ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆ ವೃತ್ತಿಯಲ್ಲಿ ಸಿಗುತ್ತಿದ್ದ ವೇತನದಿಂದ ಜೀವನ ಸಾಗಿಸೋದು ಅವರಿಗೆ ಬಹಳ ಕಷ್ಟಕರವಾಗಿತ್ತು. ಜೊತೆಗೆ ಉಪವೃತ್ತಿಯಾಗಿ ಬೆಳೆದಿದ್ದ ಆರ್ಕೆಸ್ಟ್ರಾ ಹಾಡುಗಾರಿಕೆಗೆ ಸಮಯ ನೀಡುವುದೂ ಸಾಧ್ಯವಾಗಿರಲಿಲ್ಲ. ಹಾಗಾಗಿ ಕೋರಿಯರ್ ಸಂಸ್ಥೆಯ ವೃತ್ತಿಗೆ ರಾಜೀನಾಮೆ ನೀಡಿ ರಿಕ್ಷಾ ಚಾಲಕರಾಗಿ, ಮೀನು ಮಾರಾಟಗಾರರಾಗಿ, ಫುಡ್ ಡೆಲಿವರಿ ಬಾಯ್ ಆಗಿ ಬದುಕು ಕಟ್ಟಿಕೊಳ್ಳುತಾರೆ. ತನ್ನ 6ನೇ ವಯಸ್ಸಿನಲ್ಲೇ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಭಜನೆ ಹಾಡುತ್ತಿದ್ದ ಸಂದೇಶ್ ಅವರಿಗೆ ಸಂಗೀತದಲ್ಲಿ ಎಲ್ಲಿಲ್ಲದ ಅಭಿಮಾನ. ಹಾಗಾಗಿ ಇವರು ಮೊದಲು ಸ್ಟೇಜ್ ಹತ್ತಿರೋದು ಭಜನಾ ಕಾರ್ಯಕ್ರಮವೊಂದಕ್ಕೆ. ಇವರ ಮದುವೆಯ ಬಳಿಕ ಪತ್ನಿ ಮನಿಶಾ ಇವರ ಹಾಡನ್ನು ಬಹಳ ಇಷ್ಟಪಡುತ್ತಿದ್ದರು. ಶಾಸ್ತ್ರೀಯವಾಗಿ ಸಂಗೀತ ಕಲಿಯುವಂತೆ ಒತ್ತಾಯಿಸಿದ್ದ ಪತ್ನಿಯಿಂದಾಗಿಯೇ ಇಬ್ಬರೂ ಹಿಂದೂಸ್ತಾನಿ ಸಂಗೀತ ತರಬೇತಿ ಪಡೆಯಲು ಅಮಿತ್ ಬೆಂಗ್ರೆಯರ ಬಳಿ ಸೇರಿಕೊಳ್ಳುತ್ತಾರೆ. ಒಂದೇ ತಿಂಗಳಲ್ಲಿ ಲಾಕ್ ಡೌನ್ ಘೋಷಣೆಯಾದ್ದರಿಂದ ಆ ಕಡೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ.
ಇದರ ಜೊತೆ ಜೊತೆಗೆ ಕಲೆಯ ಮೇಲೆ ಶ್ರದ್ಧೆ ಇಟ್ಟು ಬೇರೆ ವೇದಿಕೆಗಳಲ್ಲಿ ಹಾಡಲು ಶುರು ಮಾಡಿ ಕೊನೆಗೂ ತನ್ನ ನೆಚ್ಚಿನ ಗಾಯಕರಾದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕಟ್ಟಿದಂತ ಎದೆತುಂಬಿ ಹಾಡುವೆನು ವೇದಿಕೆಯಲ್ಲಿ ಅವಕಾಶ ಸಿಕ್ಕಿದೆ. ಅಲ್ಲಿ ಶ್ರೀ ರಾಮ ಚಂದ್ರ ಸಿನಿಮಾದ ಸುಂದರಿ ಸುಂದರಿ ಅನ್ನುವ ಹಾಡು ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟಿದೆ.ಇನ್ನೊAದು ಕಡೆ ಗೆಳೆಯ ರಕ್ಷಣ್ ಮಾಡೂರ್ ಜೊತೆ ಸೇರಿ ಯೂತ್ ಮೆಲೋಡಿಸ್ ಕುಡ್ಲ ಎನ್ನುವ ಆರ್ಕೆಸ್ಟ್ರಾ ತಂಡವನ್ನು ಕಟ್ಟಿ ಮತ್ತಷ್ಟು ಸಾಧನೆ ಮಾಡಿದ್ದಾರೆ. ಸಂದೇಶ್ ಅವರು ಕೇವಲ ಗಾಯಕ ಮಾತ್ರವಲ್ಲದೇ ¸ ಸಾಹಿತಿ, ನಟ, ಟ್ಯೂನ್ ಕಂಪೋಸರ್ ಕೂಡಾ ಹೌದು.
ಸಂದೇಶ್ ಅವರು ಟಿವಿ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದು, ಶಂಕರ್ ಟಿವಿಯ ಭಜನ್ ಸಾಮ್ರಾಟ್ ಸೀಸನ್ 2, ಕಲರ್ಸ್ ಕನ್ನಡದ ರಾಜಾ ರಾಣಿ ಸೀಸನ್ 2 ನಲ್ಲೂ ಭಾಗವಹಿಸಿದ್ದಾರೆ.
ಇನ್ನು ಇವರ ಶ್ರೀರಾಮ ಚಂದ್ರ ಸಿನಿಮಾದ ಗೀತೆಗೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ಜನಮೆಚ್ಚಿದ ಹೊಸ ಪರಿಚಯ ನಾನ್ ಫಿಕ್ಷನ್ ಅವಾರ್ಡ್ ಸಿಕ್ಕಿದೆ. ಜೊತೆಗೆ ಸಾಕಷ್ಟು ವೇದಿಕೆಗಳಲ್ಲಿ ಸನ್ಮಾನ ಪುರಸ್ಕಾರಗಳು ಲಭಿಸಿದೆ. ಜೊತೆಗೆ ಗಾನ ಕೇಸರಿ ಎಂಬ ಬಿರುದು, ಸರಣಿ ಶ್ರೇಷ್ಟ ಭಜನಾ ಗಾಯಕ ಅವಾರ್ಡ್ ಕೂಡಾ ಸಿಕ್ಕಿದೆ.
ಅದೇನೆ ಆಗಲಿ ಸಂದೇರ್ಶ ನೀರ್ ಮಾರ್ಗ ಎಂಬ ಹಳ್ಳಿ ಪ್ರತಿಭೆ ಈಗಾಗಲೇ ಕರುನಾಡಿನಾದ್ಯಂತ ಹೆಸರು ಮಾಡಿದ್ದು ಮುಂದಿನ ದಿನಗಳಲ್ಲಿ ದೇಶ ವಿದೇಶದಾದ್ಯಂತ ಹಾಡುವ ಅವಕಾಶ ಸಿಕ್ಕು ಹೆಸರು ಮಾಡಿ ಗುರುತಿಸಿಕೊಳ್ಳುವಂತಾಗಲಿ ಎಂಬುವುದು ನಮ್ಮ ಆಶಯ.