ಉಡುಪಿ: ಯಡಿಯೂರಪ್ಪನವರು ಚೆನ್ನಾಗಿದ್ದವರ ಜೊತೆ ಮಾತ್ರ ಜೊತೆಗಿರ್ತಾರೆ ಹೆಚ್ಚು ಕಡಿಮೆಯಾದ್ರೆ ಬಿಟ್ಟುಬಿಡ್ತಾರೆ. ಕೆಟ್ಟಗಳಿಗೆ ಬಂದಾಗ ಹಿಂದೇಟು ಹೊಡಿಯೋದು ಮಾಮೂಲು ಎಂದು ವಕ್ಫ್, ಆಹಾರ ನಾಗರಿಕ ಸರಭರಾಜು ಸಚಿವ ಜಮೀರ್ ಅಹಮ್ಮದ್ ಲೇವಡಿ ಮಾಡಿದ್ದಾರೆ.
ಉಡುಪಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಅಂದ್ರೆ ಯೂ ಟರ್ನ್ ಬಿಜಪಿಯವರಿಗೆ ಇದು ಅಭ್ಯಾಸ ಆಗಿದೆ. ಐದು ವರ್ಷ ಈ ಸರ್ಕಾರ ಇರುತ್ತೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರ್ತಾರೆ. ಮೈತ್ರಿ ಸರ್ಕಾರವನ್ನ ತಿಪ್ಪರಲಾಗ ಹಾಕಿದ್ರೂ ಏನೂ ಮಾಡೋಕಾಗಲ್ಲ.
ಯಡ್ಯೂರಪ್ಪ ಆಪ್ತರೇ ನನ್ನ ಬಳಿ ಹೇಳ್ತಾ ಇದಾರೆ, ಮುರ್ನಾಲ್ಕು ತಿಂಗಳಿಂದ ಯಡಿಯೂರಪ್ಪ ನಿದ್ದೇನೆ ಮಾಡ್ತಿಲ್ವಂತೆ. ಮುಖ್ಯಮಂತ್ರಿ ಆದೆ ಅಂತ ಕನಸು ಕಾಣ್ತಾರಂತೆ. ಕನಸು ನೋಡೋದು ತಪ್ಪಲ್ಲ, ಎಲ್ರೂ ರಾತ್ರಿ ಕನಸು ನೋಡಿದ್ರೆ ಯಡ್ಯೂರಪ್ಪ ಹಗಲುಗನಸು ನೋಡ್ತಾರೆ ಎಂದು ಟೀಕಿಸಿದರು.
ಇನ್ನು ಮೈಸೂರು ಮಹಾನಗರ ಪಾಲಿಕೆ ಕಾಂಗ್ರೇಸ್ ಮೇಯರ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಜಮೀರ್, ಮೂವತ್ತೇಳು ಸೀಟು ಇಟ್ಕೊಂಡು ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿಲ್ವಾ, ಹಾಗೆ ಅವರು ಮೇಯರ್ ಸ್ಥಾನ ಕೊಡೋದು ಯಾವ ದೊಡ್ಡ ವಿಚಾರ ಅಲ್ಲ. ಕಾರ್ಯಕರ್ತರಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದರು.
ರಾಮಮಂದಿರದ ವಿಚಾರವಾಗಿ ಮಾತನಾಡಿದ ಜಮೀರ್ ನಾಲ್ಕುವರೆ ವರ್ಷದಲ್ಲಿ ಬಿಜೆಪಿಗೆ ರಾಮಮಂದಿರ ಜ್ಞಾಪಕಕ್ಕೆ ಬಂದಿಲ್ಲ. ಲೋಕಸಭಾ ಚುನಾವಣೆ ಬಂದ್ರೆ ರಾಮಮಂದಿರ ನೆನಪಾಗುತ್ತೆ. ಮಂದಿರ ಕಟ್ಟೋಕೆ ಮುಸಲ್ಮಾನರ ವಿರೋಧ ಇಲ್ಲ. ನಮಗೆ ಮಂದಿರವೂ ಆಗ್ಬೇಕು. ಮಸೀದಿಯೂ ಆಗ್ಬೇಕು. ಸರ್ವಧರ್ಮೀಯರೂ ಸಹೋದರರಂತೆ ಬಾಳುವ ಇನ್ನೊಂದು ದೇಶ ನೋಡಿಲ್ಲ ಎಂದರು.