Tuesday, April 22, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮೇ ಆರಂಭದಲ್ಲಿ ನವೀಕರಣ ಮಾಡದಿದ್ದಲ್ಲಿ ಹೋರಾಟ: ಶಾಸಕ ರಾಜೇಶ್‌ ನಾೖಕ್‌ ಎಚ್ಚರಿಕೆ-ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದತ್ತು ಸಂಸ್ಥೆ ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ನ ದತ್ತು ಸ್ವೀಕಾರವನ್ನು ರಾಜ್ಯ ಸರಕಾರವು ನವೀಕರಣ ಮಾಡಿಲ್ಲ ಎಂದು ಆರೋಪಿಸಿ ಮಂಗಳವಾರ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮಾತನಾಡಿ, ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ವೇಳೆ ಆಗಿನ ಶಿಕ್ಷಣಾಧಿಕಾರಿಗಳ ಸಲಹೆಯಂತೆ ಟ್ರಸ್ಟ್‌ಗೆ ದತ್ತು ನೀಡಲಾಗಿದ್ದು, ಬಳಿಕ ಈ ಶಾಲೆಯು ಬೆಳೆದು ರಾಷ್ಟ್ರದ ಗಮನ ಸೆಳೆದಿದೆ. ದುಬಾರಿ ಶುಲ್ಕ ಪಡೆಯುವ ಖಾಸಗಿ ಶಾಲೆಗಳ ದೃಷ್ಟಿ ಬಿತ್ತೋ ಗೊತ್ತಿಲ್ಲ, ಕಳೆದ ಕೆಲವು ವರ್ಷಗಳಿಂದ ಕಾಣದ ಕೈಗಳು ಶಾಲೆಯ ಅಭಿವೃದ್ಧಿಗೆ ತೊಂದರೆ ನೀಡುತ್ತಿವೆ. ನಾನು ಶಾಸಕನಾದ ಬಳಿಕ ಶಾಲೆಗೆ ಆಂಗ್ಲ ಮಾಧ್ಯಮ ಜತೆಗೆ ವಿವಿಧ ರೀತಿಯ ಅನುದಾನಗಳನ್ನು ಕೊಡಿಸಿ ಅಭಿವೃದ್ಧಿಗೆ ಸಹಕಾರ ನೀಡಿದ್ದೇವೆ. ಆದರೆ ಕಳೆದ ಐದಾರು ತಿಂಗಳಿನಿಂದ ಶಾಲೆಯ ದತ್ತು ಸ್ವೀಕಾರ ನವೀಕರಣ ಆಗದೇ ಇದ್ದು, ಈ ಕುರಿತು ಶಿಕ್ಷಣ ಸಚಿವರು, ಇಲಾಖೆಯ ಕಮೀಷನರ್‌, ಇತರ ಅಧಿಕಾರಿಗಳ ಗಮನಕ್ಕೆ ತಂದಿದ್ದು ಜತೆಗೆ ಸದನದಲ್ಲೂ ವಿಷಯ ಪ್ರಸ್ತಾಪಿಸಿದಾಗ ನವೀಕರಣದ ಭರವಸೆ ಸಿಕ್ಕಿತ್ತು. 19 ಮಂದಿ ಶಿಕ್ಷಕರಿಗೆ ಟ್ರಸ್ಟ್‌ ಸಂಬಳ ನೀಡಿ ಶಾಲೆಯನ್ನು ನಡೆಸುತ್ತಿದ್ದು, ಕೇವಲ 7 ಶಿಕ್ಷಕರನ್ನು ಕೊಟ್ಟು ಸರಕಾರದ ಬಳಿ ಇದನ್ನು ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಹೀಗಾಗಿ ಒಬ್ಬ ಶಾಸಕನಾಗಿ ಈ ಶಾಲೆಯನ್ನು ಬಂದ್‌ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ನಾನು ಬಿಡುವುದಿಲ್ಲ. ಮೇ ಮೊದಲ ವಾರದೊಳಗೆ ನವೀಕರಣ ಮಾಡದೆ ಇದ್ದರೆ ಇಡೀ ಜಿಲ್ಲೆಯ ಶಾಸಕರು, ಇತರ ಪ್ರಮುಖರನ್ನು ಸೇರಿಸಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳ ಪೋಷಕಿಯರಾದ ಲೀಲಾ ಹಾಗೂ ಅರ್ಚನಾ ಮಾತನಾಡಿ, ಬಡವರಾದ ನಮ್ಮ ಮಕ್ಕಳಿಗೆ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಟ್ರಸ್ಟ್‌ ಇಲ್ಲದೆ ಇದ್ದರೆ ಇಂತಹ ಶಿಕ್ಷಣ ಸಿಗಲು ಸಾಧ್ಯವೇ ಇಲ್ಲ. ಹೀಗಾಗಿ ಸರಕಾರ ದತ್ತು ಸ್ವೀಕಾರವನ್ನು ನವೀಕರಣ ಮಾಡಿ ನಮ್ಮ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆಯಲು ಅನುವು ಮಾಡಿಕೊಡಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮುಖರಾದ ಸಂಜೀವ ಪೂಜಾರಿ ಪಿಲಿಂಗಾಲು, ಮೋಹನದಾಸ್‌, ರಾಮಚಂದ್ರ ಕರೆಂಕಿ, ಸುದರ್ಶನ್‌ ಬಜ, ಸುರೇಶ್‌ ಕೋಟ್ಯಾನ್‌, ಸಂತೋಷ್‌ ರಾಯಿಬೆಟ್ಟು, ಚಿತ್ರಾಕ್ಷಿ, ರೂಪಶ್ರೀ ಮೊದಲಾದವರಿದ್ದರು.

ಚೆಲ್ಲಾಟ ಮುಂದುವರಿದರೆ ವಿಧಾನಸೌಧದ ಮುಂದೆಯೇ ಪ್ರತಿಭಟನೆ
ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ್‌ ಅಂಚನ್‌ ಮಾತನಾಡಿ, ಶಿಕ್ಷಣ ಸಚಿವರು ಹಾಗೂ ವಿಧಾನಸಭಾಧ್ಯಕ್ಷರು ಶಾಸಕರಿಗೆ ದತ್ತು ನವೀಕರಣದ ಭರವಸೆ ನೀಡಿದ್ದು, ಆದರೆ ಇದರ ಹಿಂದೆ ಖಾಸಗಿ ಶಾಲೆಗಳ ಲಾಬಿಯ ಜತೆಗೆ ಯಾರೋ ದೂರು ಕೊಟ್ಟರೆಂದು ನವೀಕರಣವನ್ನು ತಡೆ ಹಿಡಿದಿದ್ದಾರೆ. ದತ್ತು ನವೀಕರಣಕ್ಕೆ ಅಧಿಕಾರಿಗಳಿಗೆ ಒಂದು ತಿಂಗಳ ಗಡುವನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯದ ಜತೆಗಿನ ಚೆಲ್ಲಾಟ ಮುಂದುವರಿದರೆ ವಿಧಾನಸೌಧದ ಮುಂದೆಯೇ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಅಧಿಕಾರಿಗೆ ಸಸ್ಪೆಂಡ್‌ ಬೆದರಿಕೆ
ದತ್ತು ಸ್ವೀಕಾರದ ನವೀಕರಣದ ವಿಚಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ಚರ್ಚಿಸಿದಾಗ, ನವೀಕರಣ ಮಾಡಿದರೆ ನಿಮ್ಮನ್ನು ಅಮಾನತು ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ ಎಂದು ಬಿಇಒ ಹೇಳುತ್ತಾರೆ. ಆದರೆ ನಾನು ಎಲ್ಲರನ್ನೂ ಭೇಟಿ ಮಾಡಿದಾಗಲೂ ನವೀಕರಣ ಮಾಡುತ್ತೇವೆ ಎಂದು ಹೇಳಿದವರು ಬಿಇಒ ಜತೆ ಹೀಗೆ ಯಾಕೆ ಹೇಳಿದ್ದಾರೆ ಎಂಬುದು ಆಶ್ವರ್ಯವನ್ನು ತರುತ್ತದೆ ಎಂದು ಶಾಸಕರು ತಿಳಿಸಿದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ