ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ; ಯತ್ನಾಳ್ ವಿರುದ್ಧ ಎಫ್‍ಐಆರ್ – ಕಹಳೆ ನ್ಯೂಸ್

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಕೇಳಿ ಬಂದಿದೆ.
ಏ.7 ರಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಮಾತಾಡಿದ್ದರು. ಈ ವೇಳೆ, ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಜಯಪುರ ನಗರದ ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ಹನ್ನಾನ್ ಎಂಬವರು ದೂರು ದಾಖಲಿಸಿದ್ದರು.
ಯತ್ನಾಳ್ ಅವರು `ಭಾಷಣದ ವೇಳೆ, `ದಿ.ಬಾಳಾಸಾಹೇಬ್ ಠಾಕ್ರೆ ಮನೆಯಲ್ಲಿ ಮಹಮ್ಮದ್ ಪೈಗಂಬರ್ ಹುಟ್ಟಿದ್ದಾನೆ’ ಎಂದಿದ್ದರು. ಈ ರೀತಿ ಮಾತನಾಡಿರುವುದು ಅಪಮಾನಕಾರಿ. ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಆಘಾತ ಉಂಟುಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಯತ್ನಾಳ್ ಹೇಳಿಕೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.