Recent Posts

Tuesday, April 22, 2025
ಮೈಸೂರುಸುದ್ದಿ

ರಾಜ್ಯದಲೇ ಮೊದಲ ಬಾರಿಗೆ ಶವ ಸಂಸ್ಕಾರಕ್ಕೆ ಬಯೋಗ್ಯಾಸ್ ಬಳಕೆ -ಕಹಳೆ ನ್ಯೂಸ್

ಮೈಸೂರು: ನಗರದಲ್ಲಿ ಸಂಗ್ರಹವಾಗುವ ಹಸಿಕಸದಿಂದ ಬಯೋಗ್ಯಾಸ್ ತಯಾರಿಸಿ ಅದನ್ನು ಶವಗಳ ಅಂತ್ಯ ಸಂಸ್ಕಾರಕ್ಕೆ ಬಳಸಿಕೊಳ್ಳುವ ವಿನೂತನ ಯೋಜನೆಯನ್ನು ಮಹಾನಗರ ಪಾಲಿಕೆಯು ಸಿದ್ಧಗೊಳಿಸಿದ್ದು, ಇದು ಇಡೀ ರಾಜ್ಯಕ್ಕೆ ಪ್ರಥಮವಾಗಿದೆ.

ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ 98 ಲಕ್ಷ ರೂ. ವೆಚ್ಚದಲ್ಲಿ ಬಯೋಗ್ಯಾಸ್ ಪ್ಲಾಂಟ್ ಸ್ಥಾಪನೆ ಮಾಡಲಾಗಿದ್ದು, ಇಲ್ಲಿ ತಯರಾಗುವ ಗ್ಯಾಸ್‌ನಿಂದ ಶವ ಸುಡುವ ಕಾರ್ಯ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಹರಿಶ್ಚಂದ್ರ ಘಾಟ್‌ನಲ್ಲಿ ಇರುವ ಅನಿಲ ಚಿತಾಗಾರದಲ್ಲಿ ಪ್ರಸ್ತುತ ವಾಣಿಜ್ಯ ಬಳಕೆಯ ಸಿಲಿಂಡರ್ ಉಪಯೋಗಿಸಿಕೊಂಡು ಶವ ಸುಡಲಾಗುತ್ತಿತ್ತು. ಒಂದು ಶವ ಸಂಸ್ಕಾರ ಮಾಡಲು ಒಂದು ಸಿಲಿಂಡರ್ ಬೇಕಾಗಿತ್ತು. ತಿಂಗಳಿಗೆ ಸರಾಸರಿ 40 ಸಿಲಿಂಡರ್ ಅಗತ್ಯವಿತ್ತು. ಈಗ ಇಲ್ಲೇ ಬಯೋಗ್ಯಾಸ್ ಉತ್ಪಾದನೆ ಮಾಡುವುದರಿಂದ ಸಿಲಿಂಡರ್ ಖರೀದಿ ತಪ್ಪುವುದಲ್ಲದೇ, ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ಜತೆಗೆ ಸಿಲಿಂಡರ್ ಖರೀದಿಯ ಖರ್ಚು ಉಳಿತಾಯವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ಕ-ಪಕ್ಕದ ಬಡಾವಣೆಗಳಿಂದ ತ್ಯಾಜ್ಯ ಸಂಗ್ರಹ: ಬಯೋ ಗ್ಯಾಸ್ ಪ್ಲಾಂಟ್ ಎರಡೂವರೆ ಟನ್ ತ್ಯಾಜ್ಯದಿಂದ 20 ಕೆ.ಜಿ. ತೂಕದ ಸಿಲಿಂಡರ್‌ನಷ್ಟು ಗ್ಯಾಸ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಒಂದು ಸಿಲಿಂಡರ್‌ನಲ್ಲಿ ಇರುವಷ್ಟೇ ಪ್ರಮಾಣದ ಗ್ಯಾಸ್ ಉತ್ಪಾದನೆ ಮಾಡುತ್ತದೆ. ಮೈಸೂರು ನಗರದಲ್ಲಿ ಹೋಟೆಲ್‌ಗಳು, ಮನೆಗಳಿಂದ ಪ್ರತಿನಿತ್ಯ ಹಸಿಕಸ-ಒಣಕಸವನ್ನು ಪಾಲಿಕೆಯಿಂದ ಸಂಗ್ರಹಣೆ ಮಾಡಲಾಗುತ್ತದೆ. ಹೀಗೆ ಸಂಗ್ರಹ ಮಾಡಿದ ಹಸಿಕಸವಾದ ತರಕಾರಿ ತ್ಯಾಜ್ಯ, ಹಣ್ಣು-ಹಂಪಲಿನ ತ್ಯಾಜ್ಯ ತಗೆದುಕೊಂಡು ಹೋಗಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಈಗ ಸ್ಮಶಾನದಲ್ಲಿ ಬಯೋಗ್ಯಾಸ್ ಪ್ಲಾಂಟ್ ಸ್ಥಾಪನೆ ಮಾಡಿರುವುದರಿಂದ ಅಲ್ಲಿಗೆ ಅಗತ್ಯವಾದಷ್ಟು ತ್ಯಾಜ್ಯವನ್ನು ಅಕ್ಕ-ಪಕ್ಕದ ಬಡಾವಣೆಗಳಲ್ಲೇ ಸಂಗ್ರಹ ಮಾಡಿ ಪೂರೈಕೆ ಮಾಡಲಾಗುತ್ತದೆ. ಇದರಿಂದ ದೂರದ ಸಂಸ್ಕರಣಾ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡುವ ಸಮಸ್ಯೆಯೂ ತಪ್ಪುತ್ತದೆ. ಕಸವು ಗ್ಯಾಸ್ ಆಗಿ ಪರಿವರ್ತನೆಯಾಗುವುದರಿಂದ ಕಸ ರಾಶಿಯಾಗುವುದು ತಪ್ಪುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಮಶಾನದಲ್ಲಿ ದೀಪ ಬೆಳಗಿಸಲು ಬಳಕೆ: ಮಂಚೇಗೌಡನ ಕೊಪ್ಪಲಿನ ಸ್ಮಶಾನದಲ್ಲಿ ಮತ್ತೂಂದು ಬಯೋಗ್ಯಾಸ್ ಪ್ಲಾಂಟ್ ಸ್ಥಾಪನೆ ಮಾಡಲಾಗಿದ್ದು, ಇಲ್ಲಿ ಉತ್ಪಾದನೆಯಾಗುವ ಗ್ಯಾಸ್ ಅನ್ನು ವಿದ್ಯುತ್ ಆಗಿ ಪರಿವರ್ತನೆ ಮಾಡಿಕೊಂಡು ಸ್ಮಶಾನದಲ್ಲಿ ಇರುವ ಬೀದಿ ದೀಪಗಳನ್ನು ಬೆಳಗಿಸಲು ಉಪಯೋಗಿಸಲಾಗುತ್ತದೆ. ಇಲ್ಲಿ ಎರಡೂವರೆ ಟನ್ ಹಸಿ ಕಸದಿಂದ 25 ಕಿಲೋವ್ಯಾಟ್ ವಿದ್ಯುತ್ ದೊರಕುತ್ತದೆ. ಇದನ್ನು 14 ರಿಂದ 15 ಬೀದಿ ದೀಪಗಳನ್ನು ಬೆಳಗಿಸಲು ಬಳಕೆ ಮಾಡಿಕೊಳ್ಳಬಹುದಾಗಿದೆ.

ರಾಜ್ಯದಲ್ಲಿ ಹಸಿ ಕಸದ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಮಾಡಿ ಬೇರೆ-ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಇದನ್ನು ಶವ ಸಂಸ್ಕಾರಕ್ಕೆ ಬಳಕೆ ಮಾಡುವ ಮೂಲಕ ಸುಸ್ಥಿರ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಮಾದರಿ ಯೋಜನೆ ಮಾಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಅಲ್ಲದೇ ಇದರಿಂದ ತ್ಯಾಜ್ಯದ ವಿಲೇವಾರಿಯ ಸಮಸ್ಯೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ●ಮೃತ್ಯುಂಜಯ, ಎಇಇ, ಮಹಾನಗರ ಪಾಲಿಕೆ, ಮೈಸೂರು

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ