ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ದ.ಕ.ದ ತಾಲೂಕು ಕಬ್ಬಡ್ಡಿ ಅಸೋಸಿಯೇಶನ್ ಗಳಿಗೆ ಮ್ಯಾಟ್ ವಿತರಣೆ; ದೇಶದಲ್ಲಿ ಕ್ರೀಡಾಕ್ರಾಂತಿಯಾಗುತ್ತಿದ್ದು, ಕ್ರೀಡಾಪಟು ತಯಾರು ಮೂಲದಿಂದಲೇ ನಡೆಯಲಿ: ಸಂಸದ ಕ್ಯಾ. ಚೌಟ -ಕಹಳೆ ನ್ಯೂಸ್

ಬಂಟ್ವಾಳ: ಸಂಸದರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಎನ್.ಎಂ.ಪಿ.ಎಯ ಸಿ.ಎಸ್.ಆರ್. ನಿಧಿಯಡಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಎಂಟು ತಾಲೂಕುಗಳ ಕಬ್ಬಡ್ಡಿ ಅಸೋಸಿಯೇಶನ್ ಕಬ್ಬಡ್ದಿ ಮ್ಯಾಟ್ ವಿತರಣಾ ಕಾರ್ಯಕ್ರಮ ನಡೆಯಿತು
ಹನುಮ ಜಯಂತಿ ಪ್ರಯುಕ್ತ ಕ್ರೀಡಾಭಾರತಿ ಮತ್ತು ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳ ಕಬ್ಬಡ್ಡಿ ಅಸೋಸಿಯೇಶನ್ ಗಳಿಗೆ ಮ್ಯಾಟ್ ಗಳನ್ನು ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ಕ್ಯಾ. ಚೌಟ ಅವರು, ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕ್ರೀಡಾಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ ತಂದಿದೆ. ಗ್ರಾಮೀಣ ಭಾಗದ ನೂರಾರು ಕ್ರೀಡಾಪಟುಗಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವುದಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ, ಅವಕಾಶಗಳನ್ನು ಕಲ್ಪಿಸುವಲ್ಲಿ ಮೋದಿ ಸರ್ಕಾರ ಮಹತ್ತರ ಹೆಜ್ಜೆ ಇರಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಕ್ರೀಡೆಯನ್ನು ನೋಡುವ ದೃಷ್ಟಿ ಬದಲಾಗಿದೆ. ಖೇಲೋ ಇಂಡಿಯಾ ಮೂಲಕ ಕ್ರೀಡಾಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಮೂಲಸೌಕರ್ಯವನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ದೇಶದಲ್ಲಿ ಕ್ರೀಡಾಕ್ರಾಂತಿ ನಡೆಯುತ್ತಿದ್ದು, ಕ್ರೀಡಾಪಟುಗಳನ್ನು ತಯಾರು ಮಾಡುವ ಕೆಲಸ ಮೂಲದಿಂದಲೇ ನಡೆಯಬೇಕು ಎಂಬ ದೃಷ್ಟಿಯಿಂದ ತಾಲೂಕುಗಳಲ್ಲಿ ಕ್ರಿಡಾಂಗಣವೇ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದೆ.
ಒಲಂಪಿಕ್ಸ್ ನಲ್ಲಿ ಕಬಡ್ಡಿ ಸೇರ್ಪಡೆಯಾದರೆ ಭಾರತಕ್ಕೆ ಉತ್ತಮ ಅವಕಾಶವಿದ್ದು, ಅದಕ್ಕೆ ನಮ್ಮೂರಿನ ಕ್ರೀಡಾಪಟುಗಳು ತಯಾರಾಗಬೇಕು ಎಂಬ ಹಿನ್ನೆಲೆಯಲ್ಲಿ ನೆರವು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಕಬ್ಬಡಿ ತಂಡಗಳು ಹಾಗೂ ಕ್ರೀಡಾಸ್ತಕ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ನೆರವು ನೀಡಿದ ನವಮಂಗಳೂರು ಬಂದರು ಮಂಡಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಕ್ರೀಡಾಪಟುಗಳಿಗೆ ಬಂದರು ಮಂಡಳಿ ಸಹಿತ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ನೀಡಬೇಕು ಎಂದು ಇದೇ ವೇಳೆ ಕೋರಿಕೊಂಡರು.
ಈ ವೇಳೆ ಮಾತನಾಡಿದ ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಸಂಸದರ ಸೂಚನೆಗೆ ಸ್ಪಂದಿಸಿ, ಬಂದರು ಮಂಡಳಿ ಕ್ರೀಡಾಪಟುಗಳ ಉತ್ತೇಜನಕ್ಕೆ ನೆರವು ನೀಡುವುದಾಗಿ ಹಾಗೂ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಇಂದು ಕರಾವಳಿಯ ಕ್ರೀಡಾಪಟುಗಳಿಗೆ ಸಂಘ, ಸಂಸ್ಥೆಗಳ ನೆರವಿನ ಜೊತೆಗೆ ಶಾಸಕನ ನೆಲೆಯಲ್ಲಿ ತನ್ನ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಿದ್ದು, ಗ್ರಾಮೀಣ ಮಟ್ಟದ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಲೆಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೂಡುಬಿದಿರೆ ಶಾಸಕ ವೈ.ಉಮಾನಾಥ ಕೋಟ್ಯಾನ್ ಅವರು ಕಾಲೇಜು ದಿನಗಳಲ್ಲಿ ತಾವು ಕೂಡಾ ಕಬ್ಬಡ್ಡಿಪಟುವಾಗಿ ಅನೇಕ ಪಂದ್ಯಗಳಲ್ಲಿ ಭಾಗವಹಿಸಿರುವುದನ್ನು ಸ್ಮರಿಸಿಕೊಂಡರು. ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ರಾಜ್ಯ ಚೇರ್ಮನ್ ಹಾಗೂ ಜಿಲ್ಲಾಧ್ಯಕ್ಷ ರಾಕೇಶ್ ಮಲ್ಲಿ ಸಂಸದರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಕಬಡ್ಡಿ ಆಟಗಾರರಿಗೆ ಕುರಿತಾದ ಕೆಲವು ಬೇಡಿಕೆಗಳನ್ನು ಉಲ್ಲೇಖಿಸಿದರು. ಮಾಜಿ ಸಚಿವ ಹಾಗೂ ಕ್ರೀಡಾಭಾರತಿ ರಾಜ್ಯ ಉಪಾಧ್ಯಕ್ಷ ಬಿ. ನಾಗರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ದ.ಕ.ಜಿಲ್ಲೆ ಕ್ರೀಡಾ ಇಲಾಖೆ ಮತ್ತು ಯುವಸಬಲೀಕರಣ ಉಪನಿರ್ದೇಶಕ ಪ್ರದೀಪ್ ಡಿಸೋಜ, ಖ್ಯಾತ ಪ್ರೋಕಬಡ್ಡಿ ಆಟಗಾರ ಪ್ರಶಾಂತ್ ರೈ, ಕ್ರೀಡಾಭಾರತಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಭೋಜರಾಜ್ ಕಲ್ಲಡ್ಕ, ಕ್ರೀಡಾಭಾರತಿ ದ.ಕ. ಜಿಲ್ಲಾಧ್ಯಕ್ಷ ಕಾರಿಯಪ್ಪ ರೈ ಕೆ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾಜಿ ರಾಷ್ಟ್ರೀಯ ಕಬಡ್ಡಿ ಆಟಗಾರ ಗೋಪಿನಾಥ್ ಕಾಪಿಕಾಡ್, ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಗೌರವ ಸಲಹೆಗಾರ ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಮೋಹಿತ್ ಸುವರ್ಣ, ಕಾರ್ಯದರ್ಗಶಿ ಚಂದ್ರಶೇಖರ ಕರ್ಣ, ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಪುಷ್ಪರಾಜ್ ಚೌಟ ಮಾಣಿ, ಮಂಗಳೂರು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯ್ಸ್, ಕ್ರೀಡಾಭಾರತಿ ಕಾರ್ಯದರ್ಶಿ ಡಾ. ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಕ್ರೀಡಾಭಾರತಿ ಕಾರ್ಯದರ್ಶಿ ಹರೀಶ್ ರೈ ಬಿ. ಕಾರ್ಯಕ್ರಮ ನಿರ್ವಹಿಸಿದರು.