Recent Posts

Sunday, September 22, 2024
ಸುದ್ದಿ

ಸಾಮಾಜಿಕ ಚಟುವಟಿಕೆಗಳು ಸಾಮಾಜಿಕ ಏಕತೆಗೆ ಪ್ರೇರಣೆಯಾಗಿ ಸ್ಮರಣೀಯವಾಗುತ್ತಿದೆ: ರಾಜಾ ಬೆಳ್ಚಡ – ಕಹಳೆ ನ್ಯೂಸ್

ಮಂಜೇಶ್ವರ: ತುಳುನಾಡಿನ ಆಚಾರ-ವಿಚಾರ, ನಂಬಿಕೆ-ಕಟ್ಟಳೆಗಳನ್ನು ಪರಿಪೋಶಿಸುವ ಕಾರ್ಯಚಟುವಟಿಕೆಗಳು ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಸಂಪತ್ತು ಅಧಿಕಾರಕ್ಕಿಂತಲೂ ಮಿಗಿಲಾದ ಸಂಘಟನಾತ್ಮಕ ಚಟುವಟಿಕೆಗಳಿಂದ ಬದುಕಿನ ಸಾರ್ಥಕತೆಯ ಸಾಫಲ್ಯ ಸಾಧ್ಯವಾಗುವುದೆಂದು ಹಿರಿಯ ಸಾಮಾಜಿಕ, ಧಾರ್ಮಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅಬಿಪ್ರಾಯ ವ್ಯಕ್ತಪಡಿಸಿದರು.

ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ತಂಡವು ಬದಿಯಡ್ಕದ ತುಳುವೆರೆ ಆಯನೊ ಸಮಿತಿಯ ಸಹಕಾರದೊಂದಿಗೆ ಮಂಗಳೂರಿನ ಮಾರ್ಕ್ ಇ.ಕಾಮ್ ಸೊಲ್ಯೂಶನ್ ಸಂಸ್ಥೆಯ ನೆರವಿನೊಂದಿಗೆ ಆಯೋಜಿಸಿದ್ದ ತುಳುನಾಡ ಬಾಲೆ ಬಂಗಾರ್ ಪುಟಾಣಿ ಮಕ್ಕಳ ಭಾವಚಿತ್ರ ಸ್ಪರ್ಧೆಯ ಭಾಗವಾಗಿ ಮಂಗಳವಾರ ಹೊಸಂಗಡಿಯ ಹಿಲ್‌ಸೈಡ್ ಸಭಾಂಗಣದಲ್ಲಿ ಹಮ್ಮಿಕೊಂಡ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ವೈವಿಧ್ಯಮಯ ಸಾಂಸ್ಕ್ರತಿಕ ಹಿನ್ನೆಲೆಯಲ್ಲಿ ಬೆಳೆದುಬಂದ ತುಳುನಾಡ ವೈಭವವು ಸುಂದರ, ಸಂತೃಪ್ತ ಸಮಾಜವೊಂದರ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಜಾನಪದ, ಆಚರಣೆ, ನಡಾವಳಿಗಳಿಗೆ ಪ್ರಕೃತಿಯೊಂದಿಗೆ ನಿಕಟತೆಯಿದ್ದು, ವರ್ತಮಾನದ ಜಂಜಡಗಳಿಂದ ಪಾರಾಗಲು ಸಂಸ್ಕೃತಿಯೊಂದಿಗಿನ ಹೆಜ್ಜೆ ಅಗತ್ಯ ಎಂದು ಅವರು ತಿಳಿಸಿದರು. ಬಾಲೆ ಬಂಗಾರ್ ಸಂಘಟನೆ ಆಯೋಜಿಸುವ ಮುದ್ದುಮಕ್ಕಳ ಭಾವಚಿತ್ರ ಸ್ಪರ್ಧೆ ತುಳುನಾಡಿನ ಗತ ಇತಿಹಾಸವನ್ನು ಪರಿಚಯಿಸುವಲ್ಲಿ ಸಫಲವಾಗಿದೆ. ಇಂತಹ ಯತ್ನಗಳು ಇತರರಿಗೆ ಮಾದರಿ ಎಂದು ಅವರು ತಿಳಿಸಿದರು.

ತುಳುನಾಡ ಬಾಲೆ ಬಂಗಾರ್ ಸಮಿತಿ ಗೌರವಾಧ್ಯಕ್ಷ, ಉದ್ಯಾವರ ಮಾಡ ಶ್ರೀಕ್ಷೇತ್ರದ ದೈವಪಾತ್ರಿ ರಾಜಾ ಬೆಳ್ಚಡ ಕುಂಜತ್ತೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಯ ವಿವಿಧ ಸಾಮಾಜಿಕ ಚಟುವಟಿಕೆಗಳು ಇತರರಿಗೆ ಮಾದರಿಯಾಗಿ ಮೂಡಿಬರುತ್ತಿದೆ. ಇದು ಸಾಮಾಜಿಕ ಏಕತೆಗೆ ಪ್ರೇರಣೆಯಾಗಿ ಸ್ಮರಣೀಯವಾಗುತ್ತಿದೆ ಎಂದು ತಿಳಿಸಿದರು.

ಮಂಗಳೂರಿನ ಮಾರ್ಕ್ ಇ.ಕಾಮ್ ಸೊಲ್ಯೂಶನ್ ನ ನಿರ್ದೇಶಕಿ ಆಶಾ ಶೆಟ್ಟಿ ಅತ್ತಾವರ ಸ್ಪರ್ಧಾ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಎಳೆಯ ಹರೆಯದ ಮಕ್ಕಳಿಗೆ ಆಯೋಜನೆಗೊಂಡ ತುಳುನಾಡ ಆಚರಣೆಗಳನ್ನು ಬಿಂಬಿಸುವ ಭಾವಚಿತ್ರ ಸ್ಪರ್ಧೆ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿದೆ. ಆಧುನಿಕ ಫ್ಯಾಶನ್ ಯುಗದ ಸಂದರ್ಭದಲ್ಲಿ ಪರಂಪರೆಯನ್ನು ನೆನಪಿಸುವ ಉಡುಗೆ ತೊಡುಗೆಗಳನ್ನು ಸ್ಪರ್ಧೆಗಳ ಹೆಸರಲ್ಲಾದರೂ ಬಳಸುವುದು ಯುವ ಪೀಳಿಗೆಗೆ ಪ್ರೇರಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬೆಂಗಳೂರಿನ ಸೃಷ್ಠಿ ಕಲಾಭೂಮಿ ಸಂಘಟನೆಯ ಸಂಸ್ಥಾಪಕ ಮಂಜುನಾಥ ಅಡಪ ಸಂಕಬೈಲು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಜೀ ಸದಸ್ಯೆ ಆಯಿಷಾ ಎ.ಎ.ಪೆರ್ಲ, ಬದಿಯಡ್ಕದ ಜಿ.ಕೆ.ಚಾರಿಟೇಬಲ್ ಟ್ರಸ್ಟ್ ನ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಉದ್ಯಮಿ ನರಸಿಂಹ ಕುಲಾಲ್ ಮಂಗಳೂರು, ಚುಟುಕು ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು, ರಂಗಕಲಾವಿದ ಜೆ.ಪಿ.ತೂಮಿನಾಡು, ಇಸ್ಮಾಯಿಲ್ ಮೂಡುಶೆಡ್ಡೆ, ಪ್ರಾಣ್ ಶೆಟ್ಟಿ, ರಾಜೇಶ್, ಯುವ ಚಲನಚಿತ್ರ ನಟಿ ಸಪ್ತ ಪಾವಳ ಹಾಗೂ ಮಾನ್ವಿ ಎಂ ಮೊದಲಾದವರು ಉಪಸ್ಥಿತರಿದ್ದರು.

ಬಾಲೆ ಬಂಗಾರ್ ಮುದ್ದುಮಕ್ಕಳ ಭಾವಚಿತ್ರ ಸ್ಪರ್ಧೆಯ ಪ್ರಥಮ ವಿಜೇತೆ ತ್ವಿಶ Pಜಿ.ಕಾವೂರು, ದ್ವಿತೀಯ ವಿಜೇತೆ ವಿಹಾ ಎನ್.ನಂದಳಿಕೆ, ತೃತೀಯ ವಿಜೇತ ದಕ್ಷ ಜೆ. ಆಚಾರ್ಯ ಕದ್ರಿ ಅವರಿಗೆ ಗಣ್ಯರು ವಿತರಿಸಿದರು. ಜೊತೆಗೆ ನಿರ್ಣಾಯಕರ ಮೆಚ್ಚುಗೆಗೆ ಪಾತ್ರರಾದ ಪುಟಾಣಿಗಳಿಗೂ ಸಮಧಾನಕರ ಬಹುಮಾನಗಳನ್ನು ವಿತರಿಸಲಾಯಿತು. ತೀರ್ಪುಗಾರರಾದ ಡಾ.ಸುರೇಶ್ ನೆಗಳಗುಳಿ, ಜೆ.ಪಿ.ಕೋಟೆಕ್ಕಾರ್ ಹಾಗೂ ಸುದರ್ಶನ್ ಉಪಸ್ಥಿತರಿದ್ದರು.

ತುಳುನಾಡ ಬಾಲೆ ಬಂಗಾರ್ ಸಮಿತಿ ಅಧ್ಯಕ್ಷ ಸಂಕಬೈಲು ಸತೀಶ ಅಡಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ರತನ್ ಕುಮಾರ್ ಹೊಸಂಗಡಿ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.