Saturday, November 23, 2024
ಸುದ್ದಿ

ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ವಲಯ ವಾರ್ಷಿಕೋತ್ಸವ – ಕಹಳೆ ನ್ಯೂಸ್

ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ವಲಯ ವಾರ್ಷಿಕೋತ್ಸವವು ಭಾನುವಾರ ಪಳ್ಳತ್ತಡ್ಕ ಶ್ರೀ ಮುದ್ದು ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗ್ಗೆ ಗೋಪೂಜೆ, ಗಣಪತಿ ಹವನ, ಮಾತೆಯರಿಂದ ಕುಂಕುಮಾರ್ಚನೆ, ಭಜನೆ, ಭಜನ ರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಏತಡ್ಕ ದಂಪತಿಗಳು ಕರ್ತೃಗಳಾಗಿ ಪೂಜೆಯಲ್ಲಿ ಪಾಲ್ಗೊಂಡರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಗುಣಾಜೆ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್ ಮಾತನಾಡುತ್ತಾ ವಲಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೂಜಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳು ಧಾರ್ಮಿಕತೆಯೆಡೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ. ಹೆತ್ತವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಶ್ರೀಮಠದ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳು ಪಾಲ್ಗೊಳ್ಳುವಂತೆ ಮಾಡಬೇಕು ಎಂದ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ವಲಯ ವ್ಯಾಪ್ತಿಯಲ್ಲಿ ಗೋಸೇವೆಗೈದ ಕಾರ್ಯಕರ್ತ ಚಲಿಸುವ ಗೋ ಆಲಯದ ರೂವಾರಿ ಗಣೇಶ್ ಭಟ್ ಮುಣ್ಚಿಕ್ಕಾನ ಅವರನ್ನು ಸನ್ಮಾನಿಸಿ ಮಾತನಾಡುತ್ತಾ ಗಾಯಗೊಂಡ ಗೋವನ್ನು ಆರೈಕೆ ಮಾಡಿ ಸಮಾಜಕ್ಕೆ ಆದರ್ಶವಾಗಿದ್ದಾರೆ. ಶ್ರೀ ಸಂಸ್ಥಾನದವರ ಸಮಾಜಮುಖೀ ಯೋಜನೆಗಳನ್ನು ಶಿಷ್ಯವೃಂದಕ್ಕೆ ತಲುಪಿಸುವಲ್ಲಿ ಪಳ್ಳತ್ತಡ್ಕ ವಲಯವು ಮುಂಚೂಣಿಯಲ್ಲಿದ್ದು, ಕಾರ್ಯರೂಪಕ್ಕೆ ತರುವಲ್ಲಿ ವಲಯದ ಕಾರ್ಯಕರ್ತರ ಶ್ರಮ ಶ್ಲಾಘನೀಯ ಎಂದರು. ಶ್ರೀಮಠದ ಎಲ್ಲಾ ಸೇವಾಯೋಜನೆಗಳಲ್ಲೂ ದಂಪತಿಗಳಾಗಿ ಪಾಲ್ಗೊಳ್ಳುತ್ತಿರುವ ಬೊಳ್ಳೂರು ಸುಬ್ರಹ್ಮಣ್ಯ ಭಟ್-ಸ್ವರ್ಣಲತಾ ಅವರನ್ನು ಗೌರವಿಸಲಾಯಿತು.
ಪಳ್ಳತ್ತಡ್ಕ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಮಂಡಲ ಮಾತೃವಿಭಾಗದ ಕುಸುಮಾ ಪೆರ್ಮುಖ, ಬಿಂದು ಸಿಂಧು ವಿಭಾಗದ ದೇವಕಿ ಪನ್ನೆ, ಶಿಷ್ಯಮಾಧ್ಯಮ ವಿಭಾಗದ ಸರಳಿ ಮಹೇಶ, ವಿದ್ಯಾರ್ಥಿ ವಾಹಿನಿ ಪ್ರಧಾನ ಕೇಶವಪ್ರಸಾದ ಎಡೆಕ್ಕಾನ, ವಲಯ ದಿಗ್ದರ್ಶಕ ಪತ್ತಡ್ಕ ಗಣಪತಿ ಭಟ್, ಆನೆಪಳ್ಳ ನಾರಾಯಣ ಭಟ್, ಪೆರುಮುಂಡ ಶಂಕರನಾರಾಯಣ ಭಟ್, ಪೆರಡಾಲ ವಲಯ ಅಧ್ಯಕ್ಷ ಹರಿಪ್ರಸಾದ ಪೆರ್ಮುಖ, ನೀರ್ಚಾಲು ವಲಯ ಉಪಾಧ್ಯಕ್ಷೆ ಕನಕವಲ್ಲಿ ಬಡಗಮೂಲೆ, ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ, ಗುರಿಕ್ಕಾರರು, ಶ್ರೀಕಾರ್ಯಕರ್ತರು ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ನಂತರ ಪಳ್ಳತ್ತಡ್ಕ ರಸ್ತೆ ಬದಿ ಗೋವು ಸಂಚರಿಸುವ ದಾರಿಯಲ್ಲಿ ಬಿದ್ದುಕೊಂಡಿದ್ದ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ `ಅಮೃತಪಥ’ ಕೈಗೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು