Saturday, November 23, 2024
ಸುದ್ದಿ

ಶಾಲೆಯ ಮೇಲೆ ಉರುಳಿ ಬಿದ್ದ ಲಾರಿ ಕಂಟೈನರ್ ಬಾಕ್ಸ್: ಅಪಾಯದಿಂದ ಪಾರಾದ ಮಕ್ಕಳು – ಕಹಳೆ ನ್ಯೂಸ್

ಶಾಲೆಯ ಪಕ್ಕದಲ್ಲೇ ಸಂಗ್ರಹಿಸಿಡಲಾಗಿದ್ದ ಬೃಹತ್ ಲಾರಿ ಕಂಟೈನರ್ ಬಾಕ್ಸ್ ಗಳು ಶಾಲೆಯ ಮೇಲೆಯೇ ಉರುಳಿ ಬಿದ್ದ ಘಟನೆ ಬೈಕಂಪಾಡಿ ಅಂಗರಗುಂಡಿ ಸರಕಾರಿ ಶಾಲೆಯಲ್ಲಿ ಸೋಮವಾರ ನಡೆದಿದೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅಂಗರಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಜಮೀನಿನಲ್ಲಿ ಎನ್.ಎಂ.ಪಿ.ಟಿ.ಯಿಂದ ಬಂದ ಬೃಹತ್ ಗಾತ್ರದ ಕಂಟೈನರ್‍ಗಳನ್ನು ಖಾಸಗೀ ಸಂಸ್ಥೆಯೊಂದು ಕಳೆದ ಕೆಲವು ವರ್ಷಗಳಿಂದ ಸಂಗ್ರಹಿಸಿಟ್ಟು ವ್ಯವಹಾರ ನಡೆಸುತ್ತಿತ್ತು. ಕಂಟೈನರ್‍ಗಳನ್ನು ಒಂದರ ಮೇಲೊಂದರಂತೆ ಇಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಮವಾರ ಬೆಳಿಗ್ಗೆ ಶಾಲೆ ತೆರೆದ ಸಂದರ್ಭದಲ್ಲಿ ಶಾಲೆಯ ಒಂದು ಬದಿಯ ಗೋಡೆಯ ಕಲ್ಲುಗಳು ಕುಸಿದು ಬಿದ್ದಿದ್ದು, ಪರಿಶೀಲಿಸಿದಾಗ ಪಕ್ಕದ ಜಮೀನಿನಲ್ಲಿದ್ದ ಕಂಟೈನರ್‍ಗಳು ಶಾಲೆಯ ಮೇಲೆಯೇ ಕುಸಿದುಬಿದ್ದಿರುವುದು ಕಂಡು ಬಂದಿದೆ. ಇದರಿಂದ ಶಾಲೆಯ ಪಶ್ಚಿಮ ದಿಕ್ಕಿನ ಗೋಡೆ ತೀವ್ರ ಬಿರುಕು ಬಿಟ್ಟಿದ್ದು, ಗೋಡೆಯ ಕೆಲವು ಕಲ್ಲುಗಳೂ ಉರುಳಿ ಬಿದ್ದಿದೆ. ಅಲ್ಲದೇ ಶಾಲೆಯ ಕಂಪೌಂಡ್ ಸಂಪೂರ್ಣ ಜಖಂಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುದ್ದಿ ತಿಳಿದು ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿದರು. ಬೈಕಂಪಾಡಿ ಕಾರ್ಪೋರೇಟರ್ ಪುರುಷೋತ್ತಮ ಚಿತ್ರಾಪುರ ಅವರು ಸ್ಥಳಕ್ಕೆ ಭೇಟಿ ನೀಡಿ, ಶಾಲಾ ಪಕ್ಕದಲ್ಲೇ ಬೃಹತ್ ಗಾತ್ರದ ಕಂಟೈನರ್‍ಗಳನ್ನು ಒಂದರ ಮೇಲೊಂದರಂತೆ ಅಪಾಯಕಾರಿಯಾಗಿ ಸಂಗ್ರಹಿಸಿಟ್ಟ ಸಂಸ್ಥೆಯ ಮುಖ್ಯಸ್ಥರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಶಾಲೆಗೆ ಕಂಟೈನರ್ ಉರುಳಿಬಿದ್ದ ಸುದ್ದಿ ಕೇಳಿ ಶಾಲಾ ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಿದ್ದು, ಕಂಟೈನರ್ ಸಂಸ್ತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ಶಾಲಾ ತರಗತಿ ನಡೆಯುವ ಅವಧಿಯಲ್ಲಿ ಕಂಟೈನರ್ ಉರುಳಿ ಬಿದ್ದಿದ್ದರೆ ಜೀವ ಹಾನಿಯಾಗುವ ಸಾಧ್ಯತೆ ಇತ್ತು ಎಂದು ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ಶಾಲಾ ಸನಿಹದಿಂದ ಕಂಟೈನರ್ ಸಂಗ್ರಹಿಸಿಡಲು ನೀಡಿದ್ದ ಪರವಾನಿಗೆ ರದ್ದುಪಡಿಸಿ, ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕುಸಿದು ಬಿದ್ದಿರುವ ಶಾಲಾ ಗೋಡೆ ಹಾಗೂ ಕಂಪೌಂಡನ್ನು ಪುನರ್ ನಿರ್ಮಿಸಿಕೊಡುವುದಾಗಿ ಕಂಟೈನರ್ ಉದ್ದಿಮೆ ಸಂಸ್ಥೆಯು ಒಪ್ಪಿಕೊಂಡಿದೆ.

ಈ ಸಂಬಂಧ ಶಾಲಾ ಮುಖ್ಯೋಪಾಧ್ಯಾಯಿನಿ ರವಿಕಲಾ ಶೆಟ್ಟಿ ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ.